ವಿಧಾನ ಪರಿಷತ್ತಿನಲ್ಲಿ ಪ್ರತಿಧ್ವನಿಸಿದ ಆಹಾರ ಪೂರೈಕೆಯ ಬಹುಕೋಟಿ ಹಗರಣ: ತನಿಖೆಗೆ ಕಾಂಗ್ರೆಸ್ ಪಟ್ಟು
ಬೆಳಗಾವಿ ಡಿ.27 : ರಾಜ್ಯದಲ್ಲಿ 137 ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಮತ್ತು ತರಬೇತಿ ಕೇಂದ್ರಗಳ ಪೈಕಿ ಕೇವಲ ಕಪ್ಪು ಪಟ್ಟಿಗೆ ಸೇರಿಸಲಾದ 3 ಸಂಘಗಳಿಗೆ ಅಹಾರ ಪೂರೈಕೆ ಹೊಣೆಗಾರಿಕೆ ನಿಭಾಯಿಸಲು ಅವಕಾಶ ನೀಡಿರುವುದರ ವಿರುದ್ಧ ತನಿಖೆ ನಡೆಸುವಂತೆ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಆಗ್ರಹಿಸಿದೆ.
ಸೋಮವಾರ ನಡೆದ ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರು, ರಾಜ್ಯದಲ್ಲಿ 137 ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಮತ್ತು ತರಬೇತಿ ಕೇಂದ್ರಗಳಿದ್ದು, ಅವುಗಳಲ್ಲಿ ಕೇವಲ 3 ಸಂಘಗಳಿಗೆ ಸರಾಸರಿ 2ಸಾವಿರ ಕೋಟಿ ರೂ., ವಹಿವಾಟು ಇರುವ ಹೊಣೆಗಾರಿಕೆ ನಿಭಾಹಿಸಲು ಅನುಮತಿ ನೀಡಲಾಗಿದೆ. ಈ ಮೂರು ಕೇಂದ್ರಗಳನ್ನು 2012ರಲ್ಲಿ ಅಂದಿನ ಸರಕಾರವೂ ನಿಷೇಧಿಸಿತ್ತು ಎಂದರು. ಹಾಗೂ ನ್ಯಾಯಾಲಯವು ಬಿಐಎಸ್ ಪ್ರಮಾಣ ಪತ್ರ ಪಡೆಯುವವರಿಗೆ ಪ್ರಮಾಣ ಪತ್ರ ಹೊಂದಿದ ಸಂಸ್ಥೆಗಳ ಜೊತೆ ತಾಂತ್ರಿಕ ನೆರವು ಪಡೆಯಲು ಒಪ್ಪಂದ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರೂ ಕೇವಲ ಮೂರು ಸಂಸ್ಥೆಗಳಿಗೆ ಮಾತ್ರ ಆಹಾರ ತಯಾರಿಕೆಗೆ ಬೇಕಾದ ಪದಾರ್ಥಗಳ ಖರೀದಿಯ ಜವಾಬ್ದಾರಿಯನ್ನು ಸರಕಾರ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ.ಸರಕಾರ ಈ ಕೂಡಲೇ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕಾಂಗ್ರೆಸ್ ಸದಸ್ಯರ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಈ ಬಗ್ಗೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.