ಸಿ.ಟಿ.ರವಿಯವರ ಮಾತುಗಳು ಹುಚ್ಚನ ಕನವರಿಕೆಗಳಂತೆ-ದಿನೇಶ್ ಗುಂಡೂರಾವ್
ಬೆಳಗಾವಿ, ಡಿ.27 : ನಮಗೆ ರವಿ ಮಾತುಗಳು ಹುಚ್ಚನ ಕನವರಿಕೆಗಳಂತೆ. ತಲೆ ಸರಿ ಇಲ್ಲದವರ ಮಾತಿಗೆ ಯಾರಾದರೂ ತಲೆ ಕೆಡಿಸಿಕೊಳ್ಳುತ್ತಾರೆಯೇ ? ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಅವರು ಸಿಟಿ ರವಿ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ತನ್ನ ಮಾತುಗಳು ಕಾಂಗ್ರೆಸ್ ನಾಯಕರಿಗೆ ಮರ್ಮಘಾತವಾದಂತೆ ಎಂದು ಸಿ.ಟಿ.ರವಿ ತಮ್ಮನ್ನು ತಾವೆ ಆತ್ಮಪ್ರಶಂಸೆ ಮಾಡಿಕೊಂಡಿದ್ದಾರೆ. ನಾವು ಸಿ.ಟಿ.ರವಿಯವರನ್ನು ನಿಮ್ಹಾನ್ಸ್ ರೋಗಿಗಳ ಪಟ್ಟಿಯಲ್ಲಿಟ್ಟಿದ್ದೇವೆ. ಹಾಗಾಗಿ ನಮಗೆ ರವಿ ಮಾತುಗಳು ಹುಚ್ಚನ ಕನವರಿಕೆಗಳಂತೆ. ತಲೆ ಸರಿ ಇಲ್ಲದವರ ಮಾತಿಗೆ ಯಾರಾದರೂ ತಲೆ ಕೆಡಿಸಿಕೊಳ್ಳುತ್ತಾರೆಯೇ? ಎಂದು ಹೇಳಿದ್ದಾರೆ.
ಸಿ.ಟಿ.ರವಿಯವರಿಗೆ ಸಂಸ್ಕಾರ ಎಂಬ ಪದದ ಅರ್ಥವೇ ಗೊತ್ತಿಲ್ಲ. ಕಾಂಗ್ರೆಸ್ ನಾಯಕರ ಬಗ್ಗೆ ಅಸಹ್ಯಕರ ಪದ ಬಳಕೆ ಮಾಡುವ ರವಿಯವರಿಗೆ ಯಾವ ಸಂಸ್ಕಾರವಿದೆ? ಹೆಂಡ ಕುಡಿದವರಿಗಿಂತಲೂ ಕಡೆಯಾಗಿ ಮಾತಾಡುವ ಸಿ.ಟಿ.ರವಿಯವರನ್ನು ಜನ ಸುಮ್ಮನೆ ಒ.ಟಿ.ರವಿ ಎನ್ನುತ್ತಾರೆಯೇ? ಒಟಿ ಕುಡಿಯದೆ ರವಿಯವರ ಬಾಯಿಂದ ಇಂತಹ ಕೊಳಕು ಹೇಳಿಕೆಗಳು ಹೇಗೆ ಬರಲು ಸಾಧ್ಯ? ಎಂದು ಟೀಕಿಸಿದ್ದಾರೆ.
ವಾಜಪೇಯಿ ಮತ್ತು ಅಡ್ವಾಣಿ ತೆರೆಗೆ ಸರಿದ ಮೇಲೆ ಬಿಜೆಪಿಯಲ್ಲಿ ಸಂಸ್ಕಾರಹೀನ, ಚಾರಿತ್ರ್ಯಶೂನ್ಯ ವ್ಯಕ್ತಿಗಳೇ ತುಂಬಿಕೊಂಡಿದ್ದಾರೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ಬಿಜೆಪಿಯಲ್ಲಿರುವ ಬಹುತೇಖರು ಸಿ.ಟಿ.ರವಿಯರಂತೆ ಕೊಳಕು ಗಿರಾಕಿಗಳೆ. ಬಿಜೆಪಿಯಲ್ಲಿ ಯಾರಾದರೂ ಸಭ್ಯಸ್ಥರಿದ್ದಿದ್ದರೆ ರವಿಯವರಿಗೆ ಇಷ್ಟೊತ್ತಿಗೆ ಬೈದು ಬುದ್ದಿ ಹೇಳಬೇಕಿತ್ತಲ್ಲವೇ? ಎಂದು ಹೇಳಿದ್ದಾರೆ.
ಸಿ.ಟಿ.ರವಿಯವರೆ, ‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದುಹುದು ಎನ್ನಬೇಕು’ ಎಂಬುದು ಬಸವಣ್ಣನ ವಾಣಿ. ಬಸವಣ್ಣ ಹುಟ್ಟಿದ ನಾಡಿನಲ್ಲಿ ನಿಮ್ಮಂತಹವರ ಬಾಯಿಂದ ಇಂತಹ ಕೊಳಕು ಮಾತುಗಳೇ? ಮೊದಲು ಸಂಸ್ಕಾರ ಕಲಿಯಿರಿ. ಆಮೇಲೆ ಮರ್ಮಾಘಾತದ ಮಾತು ಎಂದು ಅವರು ಹೇಳಿದ್ದಾರೆ.