ಮಂಗಳೂರು: ಹೆಣ್ಣಿನ ಅಕ್ರಮ ಸಂಬಂಧವೇ ಜಲೀಲ್ ಹತ್ಯೆಗೆ ಕಾರಣ
ಮಂಗಳೂರು ಡಿ.26 : ಸುರತ್ಕಲ್ ನ ಕಾಟಿಪಳ್ಳ ನಿವಾಸಿ ಅಬ್ದುಲ್ ಜಲೀಲ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಜಲೀಲ್ ನು ಹಿಂದೂ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರಿಂದ ಹತ್ಯೆ ನಡೆಸಲಾಗಿದೆ ಎಂಬ ಅಂಶ ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿ ಶೈಲೇಶ್ ಪೂಜಾರಿ, ಸವಿನ ಕಾಂಚನ್, ಪವನ್ ಅಲಿಯಾಸ್ ಪಚ್ಚು ಎಂಬ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆ ವೇಳೆ ಜಲೀಲ್ ನು ಸ್ಥಳೀಯ ಹಿಂದು ಮಹಿಳೆ ಲೇಡಿ ಟೈಲರ್ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಕ್ಕೆ ಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಮಾಡಿದ್ದೇವೆ. 14 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇವರಲ್ಲಿ ಇಬ್ಬರು ನೇರ ಭಾಗಿಯಾಗಿದ್ದು, ಓರ್ವ ಅವರನ್ನು ಬೈಕ್ ನಲ್ಲಿ ತಂದು ಬಿಟ್ಟಿದ್ದ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕೊಲೆಗೆ ಕಾರಣ ಏನು ಎಂಬುವುದನ್ನು ಪೂರ್ಣ ತನಿಖೆ ಬಳಿಕ ಹೇಳಲಾಗುವುದು. “ತನಿಖೆಯ ಸಮಯದಲ್ಲಿ, ನಾವು ಮಹಿಳೆ ಸೇರಿದಂತೆ 12 ಜನರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಬಳಿಕ ಮೂವರನ್ನು ಬಂಧಿಸಲಾಗಿದೆ ಎಂದರು.
ಏತನ್ಮಧ್ಯೆ, ಮಂಗಳೂರಿನ ಕೆಲವು ಭಾಗಗಳಲ್ಲಿ ಉದ್ವಿಗ್ನತೆ ಮುಂದುವರಿದಿದ್ದು, ಪೊಲೀಸರು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‍ಪಿಸಿ) ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಮಂಗಳೂರು ನಗರದ ಸುರತ್ಕಲ್, ಬಜ್ಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಮು ಸೂಕ್ಷ್ಮ ಪ್ರದೇಶಗಳಾಗಿರುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಅವರು ತಿಳಿಸಿದ್ದಾರೆ.