ಕೃಷ್ಣಾಪುರ ಜಲೀಲ್ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಂಗಳೂರು, ಡಿ.26 : ಕೃಷ್ಣಾಪುರದಲ್ಲಿ ನಡೆದ ಅಬ್ದುಲ್ ಜಲೀಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ (21), ಉಡುಪಿಯ ಹೆಜಮಾಡಿ ನಿವಾಸಿ ಸವಿನ್ ಕಾಂಚನ್ ಅಲಿಯಾಸ್ ಮುನ್ನ (24) ಹೆಜಮಾಡಿ ಉಡುಪಿ, ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಬಂಧಿತ ಆರೋಪಿಗಳು.

ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಆರೋಪಿಗಳನ್ನು ರವಿವಾರ ರಾತ್ರಿ ಬಂಧಿಸಲಾಗಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಸದ್ಯದ ವಿಚಾರಣೆಯಲ್ಲಿ ಬಂಧಿತ ಮೂವರು ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಬಂಧಿತ ಆರೋಪಿಗಳ ಪೈಕಿ ಇಬ್ಬರು ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳಾಗಿದ್ದರೆ, ಇನ್ನೋರ್ವ ಆರೋಪಿಗಳಿಗೆ ಬೈಕಿನಲ್ಲಿ ಪರಾರಿಯಾಗಲು ನೆರವಾದವನು ಎಂದು ತಿಳಿಸಿದ್ದಾರೆ.

ಯಾವ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ, ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗುವುದು. ಬಂಧಿತರ ಪೈಕಿ ಇಬ್ಬರ ವಿರುದ್ಧ ಸುರತ್ಕಲ್ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. 2021ರಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಇವರು ಭಾಗಿಯಾಗಿರುವುದು ತಿಳಿದು ಬಂದಿದೆ

ಜಲೀಲ್ ಕೊಲೆ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರ ಬಂಧನಕ್ಕೆ ಕ್ರಮ ಕೈಕೊಳ್ಳಲಾಗುವುದು. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯರು ಸೇರಿದಂತೆ ಸುಮಾರು 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಅಲ್ಲದೆ ಜಲೀಲ್ ಕುಟುಂಬಸ್ಥರ ಮನವಿಯಂತೆ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಡಿ.24 ರಂದು ಅಬ್ದುಲ್ ಜಲೀಲ್ ಅವರನ್ನು ಕೃಷ್ಣಾಪುರ 4ನೆ ಬ್ಲಾಕ್ ನೈತಂಗಡಿ ಬಳಿಯಿರುವ ಅವರ ಫ್ಯಾನ್ಸಿ ಮತ್ತು ಚಪ್ಪಲಿಯ ಅಂಗಡಿಯಲ್ಲಿ ಕೊಲೆಗೈಯಲಾಗಿದೆ. ಅಂಗಡಿಗೆ ನುಗ್ಗಿದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಜಲೀಲ್ ಅವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಜಲೀಲ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಅವರು ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!