ಕೋವಿಡ್-19 ಭೀತಿ: ದ.ಕ. ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಮಾರ್ಗಸೂಚಿ
ಮಂಗಳೂರು, ಡಿ.26 : ಕೆಲವು ದೇಶಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಕಾರಣ ಮುಂಜಾಗೃತಾ ಕ್ರಮವಾಗಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಎಚ್ಚರ ವಹಿಸುವಂತೆ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಮುನ್ನೆಚ್ಚರಿಕಾ ಕ್ರಮದ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಜಿಲ್ಲಾಧಿಕಾರಿ ಹೊರಡಿಸಿರುವ ಮುನ್ನೆಚ್ಚರಿಕಾ ಮಾರ್ಗಸೂಚಿಯಲ್ಲಿ ಶಾಪಿಂಗ್ ಮಾಲ್, ಕಚೇರಿಗಳು, ಸಿನೆಮಾ ಹಾಲ್, ಪಬ್, ಬಾರ್, ರೆಸ್ಟೋರೆಂಟ್ ಹಾಗೂ ಬಸ್, ರೈಲು, ಮಟ್ರೋ, ವಿಮಾನ ಯಾನದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಅಗತ್ಯಗೊಳಿಸಲಾಗಿದೆ. ಆರೋಗ್ಯ ಸಮಸ್ಯೆ ಇರುವವರು, ವೃದ್ಧರು ಒಳಾಂಗಣದಲ್ಲಿದ್ದಾಗಲೂ ಮಾಸ್ಕ್ ಧರಿಸುವುದು ಉತ್ತಮ ಎಂದು ಸೂಚಿಸಿದ್ದಾರೆ.
ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆದಷ್ಟು ಹೊರಾಂಗಣದಲ್ಲಿ ಆಯೋಜಿಸಬೇಕು. ಕೈಗಾರಿಕೆ ಸಂಸ್ಥೆ, ಗಾರ್ಮೆಂಟ್ಸ್ ಸಹಿತ ಇತರ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕಡ್ಡಾಯವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಮತ್ತು ಮಾಸ್ಕ್ ಧರಿಸಬೇಕು. ಹೆಚ್ಚಿನ ಜನರು ಗುಂಪುಗೂಡುವಿಕೆಯನ್ನು, ವಿಶೇಷವಾಗಿ ಒಳಾಂಗಣಗಳಲ್ಲಿ ಗುಂಪುಗೂಡುವಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ಅವರು ಸೂಚನೆ ನೀಡಿದ್ದಾರೆ.