ಮನುಸ್ಮೃತಿ ಮೂಲಕ ದಲಿತರ ದಮನಕ್ಕೆ ಯತ್ನ- ಜಯನ್ ಮಲ್ಪೆ ಕಿಡಿ

ಉಡುಪಿ ಡಿ.26(ಉಡುಪಿ ಟೈಮ್ಸ್ ವರದಿ): ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಉಡುಪಿ ಜಿಲ್ಲೆ ಇದರ ವತಿಯಿಂದ ಅಜ್ಜರಕಾಡಿನ ಹುತಾತ್ಮರ ಸ್ಮಾರಕದ ಮುಂಭಾಗದಲ್ಲಿ ಮನುಸ್ಮೃತಿ ದಹನ ಕಾರ್ಯಕ್ರಮ ನಿನ್ನೆ ನಡೆಯಿತು.

ಈ ವೇಳೆ ಮಾತನಾಡಿದ ದಲಿತ ಹೋರಾಟಗಾರ ಜಯನ್ ಮಲ್ಪೆ ಅವರು ಮಾತನಾಡಿ, ಸಂಘಪರಿವಾರ ಅಂಬೇಡ್ಕರ್ ಬರೆದ ಸಂವಿಧಾನವನ್ನು ಯಾವತ್ತೂ ಒಪ್ಪದೆ, ಮನುಸ್ಮೃತಿಯ ಆಧಾರದಲ್ಲಿ ದಲಿತರನ್ನು ದಮನಿಸುವ ಕೆಲಸವನ್ನು ಈಗಲೂ ಮಾಡುತ್ತಿದೆ ಎಂದು ದೂರಿದರು.

ಇದೇ ವೇಳೆ ದಲಿತ ಮುಖಂಡ ಸುಂದರ್ ಮಾಸ್ತರ್ ಅವರು ಮಾತನಾಡಿ, ಕಳೆದ ಏಳೆಂಟು ವರ್ಷಗಳಲ್ಲಿ ಶೇ.50ರಷ್ಟು ಭಾಗ ಮನುಸ್ಮೃತಿ ಜಾರಿಗೊಂಡಿದೆ. ಇದು ಪೂರ್ತಿಯಾಗಿ ಜಾರಿಗೊಂಡರೆ, ನಮ್ಮ ಬದುಕನ್ನು ನಾವು ಕಳೆದುಕೊಳ್ಳುತ್ತೇವೆ. ಹಾಗಾಗಿ ಮುಂದಿನ ದಿನಗಳಲ್ಲಿ ದಲಿತರೆಲ್ಲ ಒಗ್ಗೂಡಿ ಇನ್ನಷ್ಟು ತೀವ್ರಗತಿಯ ಹೋರಾಟಗಳನ್ನು ಮಾಡಬೇಕು ಎಂದು ಕರೆ ನೀಡಿದರು. ಹಾಗೂ ದೇಶದಲ್ಲಿ ದಲಿತರ ಮೇಲೆ ಸಾವಿರಾರು ದೌರ್ಜನ್ಯ ಪ್ರಕರಣಗಳು ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಬಾಯಿ ಬಿಡುತ್ತಿಲ್ಲ. ಒಂದೇ ಒಂದು ಖಂಡನೀಯ ಶಬ್ದ ಅವರ ಬಾಯಿಂದ ಬರುತ್ತಿಲ್ಲ. ಅವರು ಸಂಪೂರ್ಣವಾಗಿ ಆರ್.ಎಸ್. ಎಸ್ ಗೆ ಒಗ್ಗಿಕೊಂಡಿದ್ದಾರೆ ಎಂಬುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಂಜುನಾಥ್ ಗಿಳಿಯಾರು, ಶ್ಯಾಮರಾಜ್ ಬಿರ್ತಿ, ಶೇಖರ್ ಹೆಜಮಾಡಿ, ವಿಶ್ವನಾಥ ಬೆಳ್ಳಂಪಳ್ಳಿ, ವಾಸುದೇವ ಮುದ್ದೂರು, ಸಂಜೀವ ಬಳ್ಕೂರು, ಹರೀಶ್ ಮಲ್ಪೆ, ಶ್ಯಾಮಸುಂದರ ತೆಕ್ಕಟ್ಟೆ, ಕುಮಾರ್ ಕೋಟ, ದಲಿತ ಪರ ಹೋರಾಟಗಾರರಾದ ಬಾಲಕೃಷ್ಣ ಶೆಟ್ಟಿ, ಪ್ರೊ. ಫಣಿರಾಜ್, ಶ್ರೀರಾಮ ದಿವಾಣ, ಯಾಸಿನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!