ಉಡುಪಿ: ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ, ಸ್ವಂತ ಬಲದಲ್ಲಿ ಅಧಿಕಾರಕ್ಕೆ – ಅಟಲ್ ಉತ್ಸವದಲ್ಲಿ ಬಿಜೆಪಿ ನಾಯಕರ ಅಭಿಮತ
ಉಡುಪಿ ಡಿ.26 (ಉಡುಪಿ ಟೈಮ್ಸ್ ವರದಿ): ಉಡುಪಿ ನಗರ ಹಾಗೂ ಗ್ರಾಮಾಂತರ ಬಿಜೆಪಿ ವತಿಯಿಂದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 98 ನೇ ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಅಟಲ್ ಉತ್ಸವ ಕಾರ್ಯಕ್ರಮದ ಅಂಗವಾಗಿ ಬೂತ್ ಸಂಗಮ ಕಾರ್ಯಕ್ರಮ ನಿನ್ನೆ ಸಂಜೆ ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆಯಿತು
ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಶಾಸಕ ರಘುಪತಿ ಭಟ್ ಅವರು ಸೇರಿ ಪಕ್ಷದ ನಾಯಕರೊಂದಿಗೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಮುಂದಿನ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವುದು ಮಾತ್ರವಲ್ಲದೆ 150 ಸ್ಥಾನಗಳನ್ನು ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಗೂ ದೇಶದಲ್ಲಿ ಸಂಘಟನೆಯ ಹತ್ತಾರು ಕಾರ್ಯಗಳು ನಡೆದಿದೆ. ಆದರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನಿಮಿತ್ತ ದೇಶದಲ್ಲೇ ಉಡುಪಿಯಲ್ಲಿ ಮಾದರಿಯಾದ ಕಾರ್ಯಕ್ರಮ ನಡೆದಿದೆ. ಬಹಳ ಅದ್ಬುತವಾದ ಕಾರ್ಯಕ್ರಮದ ಅನುಷ್ಠಾನ ನಡೆದಿದೆ. ಅಟಲ್ ಜಿ ಅವರು ಸಂಘಟನೆಯಿಂದ ಮೇಲೆ ಬಂದು ಸಂಟನೆಯನ್ನು ಇಷ್ಟು ಎತ್ತರಕ್ಕೆ ಏರಿಸಿದ್ದರು. ಅಟಲ್ ಜಿ ಅವರ ಜನ್ಮದಿನದ ಪ್ರಯುಕ್ತ ಮಾದರಿಯಾಗಿ ಬೂತ್ ನಿಂದ ಕಾರ್ಯಕರ್ತರನ್ನು ಸೇರಿಸಿ ಬೂತ್ ಸಂಗಮ ಮಾಡಿದ ಕೀರ್ತಿ ಉಡುಪಿಗೆ ಸಲ್ಲುತ್ತದೆ ಎಂದರು.
ಈ ವೇಳೆ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ ಅವರು ಮಾತನಾಡಿ, ಈ ಬಾರಿಯ ಚುನಾವಣೆ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಯುದ್ಧವಲ್ಲ. ಇದು ಧರ್ಮ ಮತ್ತು ಅಧರ್ಮದ ಯುದ್ಧ. ಬಿಜೆಪಿ ಪಕ್ಷ ಅಧಿಕಾರ ಇದ್ದರೂ ಇಲ್ಲದಿದ್ದರೂ ನಿರಂತರ ಕೆಲಸ ಮಾಡತ್ತಾ ಬರುತ್ತಿದೆ. ಬಿಜೆಪಿ ಪಕ್ಷಕ್ಕಾಗಿ ಅಲ್ಲ ಸಮಾಜದ ಏಳಿಗೆಗಾಗಿ ಕೆಲಸ ಮಾಡುತ್ತಿದೆ. ಪಕ್ಷ ಗೆದ್ದರೆ ಏನಾಗುತ್ತದೆ ಗೆಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ಅರಿತಾಗ ದೇಶದ ಅಭಿವೃದ್ಧಿಗೆ ಕಾರ್ಯನಡೆಸಲು ಸಾಧ್ಯವಾಗುತ್ತದೆ ಎಂದರು. ಹಾಗೂ ದೇಶದಲ್ಲಿ ಡಬಲ್ ಇಂಜಿನ್ ಸರಕಾರ ಏನು ಮಾಡಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿದೆ ಎಂದ ಅವರು, 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಅತೀ ಹೆಚ್ಚು ಅಭಿವೃದ್ಧಿಯಾಗಿದೆ. ಈ ಹಿಂದೆ ಕುಮಾರ ಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರಕಾರ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆಯ ಸರಿಯಾದ ಮಾಹಿತಿ ಕೇಂದ್ರಕ್ಕೆ ನೀಡದೆ ಕೇವಲ 17 ಜನರು ಫಲಾನುಭವಿಗಳು ಇದ್ದರು. ಕುಮಾರ ಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ತಪ್ಪಿನಿಂದ 40 ಲಕ್ಷಕ್ಕೂ ಅಧಿಕ ಮಂದಿ ರೈತರು ಯೋಜನೆಯಿಂದ ವಂಚಿತರಾಗಿದ್ದರು. ಆದರೀಗ 40 ಲಕ್ಷಕ್ಕೂ ಅಧಿಕ ಮಂದಿ ರೈತರು ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದ್ದರಿಂದ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿಜೆಪಿ ಸರಕಾರ ಇರಬೇಕು ಎಂದರು.
ಬಿಜೆಪಿ ಸರಕಾರ 2023 ರಲ್ಲಿ ಸಮಾನ ನಾಗರಿಕ ಯೋಜನೆ ಜಾರಿ ತರುವ ಯೋಚನೆ ಹೊಂದಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೆ ಬರುವುದಿಲ್ಲ. ಡಿ.ಕೆ.ಶಿ ಮತ್ತು ಸಿದ್ದರಾಮಯ್ಯ ಅವರಿಗೆ ಈ ಯೋಜನೆ ಬೇಕಾಗಿಲ್ಲ. ಬಿಜೆಪಿ ಜಾರಿಗೆ ಬಂದರೆ ಸಮಾನ ನಾಗರಿಕ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದರು. ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಯುವ ಜನತೆ ಹೆಚ್ಚು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಈ ಸರಕಾರದಲ್ಲಿ ಮಹಿಳೆಯರಿಗೆ ಸಮ್ಮಾನವನ್ನು ನೀಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಗೋ ನಿಷೇಧ ಕಾಯ್ದೆ, ಮತಾಂತರ ನಿಷೇಧ ಕಾಯ್ದೆ ವಾಪಸ್ಸು ತಗೋತೇವೆ ಎನ್ನುವವರು ಅಧಿಕಾರಕ್ಕೆ ಬರುತ್ತಾರೆ. ಆದ್ದರಿಂದ ಹಳ್ಳಿ ಹಳ್ಳಿಗಳಲ್ಲಿ ಪಕ್ಷದ ಕಾರ್ಯವನ್ನು ತಲುಪಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಹಾಗೂ ರಾಜ್ಯದಾದ್ಯಂತ ಬೂತ್ ಅಭಿಯಾನ ಜ.2 ರಿಂದ 12 ರ ವರೆಗೆ ನಡೆಯಲಿದ್ದು, ಈ ಅಭಿಯಾನದಲ್ಲಿ ಕಾರ್ಯಕರ್ತರ ವಾಟ್ಸ್ ಆಪ್ ಗ್ರೂಪ್ ಮಾಡಿ ಬೂಗಳಲ್ಲಿ ನಡೆಯುವ ಕೆಲಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ಉತ್ತಮ ಕೆಲಸಗಳು, ಕೇಂದ್ರ ಹಾಗೂ ರಾಜ್ಯ ಸರಕಾರದ ಉತ್ತಮ ಕೆಲಸಗಳ ಮಾಹಿತಿ ಹಂಚಿಕೊಳ್ಳಬೇಕು ಹಾಗೂ ಮನೆ ಮನೆಯಲ್ಲಿ ಪಕ್ಷದ ಧ್ವಜ ಹಾರಿಸಬೇಕು ಎಂದರು.
ಈ ವೇಳೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಬಿಜೆಪಿ ಶಸ್ತ್ರಾಸ್ತ್ರ ನಿರ್ಮಾಣ ಮಾಡುವ ಪಕ್ಷವಲ್ಲ, ಇದು ದೇಶ ರಕ್ಷಣೆಗೆ ಸಮಾಜದ ಉನ್ನತಿಗೆ ನಿರ್ಮಾಣವಾದ ಪಕ್ಷ. ಈ ದೇಶದ ಅಭಿವೃದ್ಧಿಯ ತತ್ವ, ಆದರ್ಶ, ಉದ್ದೇಶದಿಂದ ಸ್ಥಾಪಿಸಲಾಯಿತು. ಪಕ್ಷ ಸಂಘಟನೆಗಾಗಿ ಹಾಗೂ ಪಕ್ಷದ ರಕ್ಷಣೆಗಾಗಿ, ಪಕ್ಷಕ್ಕಾಗಿ ಲಕ್ಷಾಂತರ ಕಾರ್ಯಕರ್ತರು ತ್ಯಾಗ ಬಲಿದಾನ ಮಾಡಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು, ಹಿರಿಯ ನಾಯಕರನ್ನು ಸ್ಮರಿಸಬೇಕು. ಇವರ ತ್ಯಾಗ ಸೇವೆಯಿಂದಾಗಿ ಇಂದು ದೇಶದಲ್ಲಿ ಡಬಲ್ ಇಂಜಿನ್ ಸರಕಾರ ಅಧಿಕಾರ ಬಂದಿದೆ. ಬಿಜೆಪಿ ನುಡಿದಂತೆ ನಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಬಂದಾಗ ದೇಶದ ಗಡಿ, ಸೈನಿಕರು ರಕ್ಷಣೆಯ ಭರವಸೆ ನೀಡಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಕ್ಕೆ ಹೋದಾಗ ನೀಡುವ ಗೌರವ ಅದು ದೇಶಕ್ಕೆ ಸಿಗುತ್ತಿರುವ ಗೌರವ. ಇಂದು ಆಹಾರ ಧಾನ್ಯ ಉತ್ಪಾದನೆ ಯಲ್ಲಿ ದೇಶ ಉನ್ನತ ಸ್ಥಾನದಲ್ಲಿ. ಆಹಾರ ಧಾನ್ಯಗಳ ರಫ್ತು ಮಾಡುವಲ್ಲಿ ದೇಶ 8 ನೇ ಸ್ಥಾನದಲ್ಲಿದೆ. ಜಾಗತಿಕ ಮಟ್ಟದಲ್ಲಿ ಇಂದು ದೇಶ ಸ್ಪರ್ಧೆ ಮಾಡುವಂತಾಗಿದೆ ಎಂದರು.
ಸಿದ್ದರಾಮಯ್ಯ ಅವರು ಜಾತಿ ಜಾತಿಗಳನ್ನು ಧರ್ಮಗಳನ್ನು ಒಡೆಯುವ ಕೆಲಸ ಮಾಡಿದ್ದರು. ಆದರೀಗ ಅವರು ನಾನು ಮುಖ್ಯ ಮಂತ್ರಿ ಆಗುತ್ತೇನೆ ಎನ್ನುತ್ತಿದ್ದಾರೆ. ಅವರ ಧೈರ್ಯ ವನ್ನು ಕುಂದಿಸುವ ಕೆಲಸ ಅವರ ಮಾತನ್ನು ಸುಳ್ಳಾಗಿಸುವ ಕೆಲಸ ರಾಜ್ಯ ಬಿಜೆಪಿ ಕಾರ್ಯಕರ್ತರ ಜವಾಬ್ದಾರಿಯಾಗಿದೆ. 2023 ರಲ್ಲಿ ಸ್ವಂತ ಬಲದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವರು ಅಧಿಕಾರಕ್ಕೆ ಬಂದು ಕೋರತೆ ಇರುವ ಪ್ರದೇಶಗಳಲ್ಲಿ ಅಭಿವೃದ್ಧಿ ಮಾಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ದೇಶದ ಅಭಿವೃದ್ಧಿ ಗೆ ನರೇಂದ್ರ ಮೋದಿ ಅವರ ನೇತೃತ್ವದ ಅಗತ್ಯವಿದೆ. ಕೋವಿಡ್ ಅವಧಿಯಲ್ಲಿ ಇಡೀ ಜಗತ್ತೇ ತತ್ತರಿಸಿ ಹೋಗಿದ್ದ ಸಮಯದಲ್ಲಿ ಭಾರತ ಗಟ್ಟಿಯಾಗಿ ನಿಲ್ಲುವಂತೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಗಳು. ಯಾವುದೇ ಪಕ್ಷವನ್ನು ಸೋಲಿಸುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗಿದೆ. ಪಕ್ಷ ಸಂಘಟನೆಯ ಪಾಠವನ್ನು ಉಡುಪಿ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರಿಂದ ಕಲಿಯಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಕಾರ ನೀಡುವ ಮೂಲಕ ಉಡುಪಿಯಲ್ಲಿ ಭ್ರಷ್ಟಾಚಾರ ಮುಕ್ತ ಸರಕಾರ ರಚಿಸುವ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಇದೇ ವೇಳೆ ಶಾಸಕ ರಘುಪತಿ ಭಟ್ ಅವರು ಮಾತನಾಡಿ, 1999 ರಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿನಲ್ಲಿ ಅಟಲ್ ಟ್ರೋಫಿ ಆಚರಿಸುತ್ತಾ ಬರುತ್ತಿದ್ದೇವೆ. ಇಂದು 226 ಬೂತ್ ನಲ್ಲಿ ನಾವು ಒಗ್ಗಟ್ಟಾಗಿ ಬಿಜೆಪಿ ಸಂಘಟನೆ ಮಾಡುತ್ತೇವೆ ಎಂದು ಸಂಕಲ್ಪ ಮಾಡುವ ಸಂದರ್ಭದಾಗಿದೆ. ಡಾ. ವಿಎಸ್ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಉಡುಪಿ ಅಬಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಕಂಜೆಶನ್ ಸಿಟಿಯಂತಿದ್ದ ಉಡುಪಿ ಇಂದು ಚತುಷ್ಪಥ ನಗರವಾಗಿ ಬೆಳೆದಿದೆ ಎಂದರು. ಹಾಗೂ ಯಾವುದೇ ಕಾರ್ಯಕರ್ತರು ಅಭಿವೃದ್ಧಿ ಕೆಲಸ ಮಾಡುವ ನಿಟ್ಟಿನಲ್ಲಿ ಕೇಳಿಕೊಂಡಾಗ ಯಾವತ್ತೂ ವಿಳಂಬ ಮಾಡಿಲ್ಲ. ಹಳ್ಳಿಗಳಲ್ಲಿ, ಬೂತ್ ಗಳಲ್ಲಿ ಮಾಡಿರುವ ಅಧ್ಯಕ್ಷರ, ಕಾರ್ಯಕರ್ತರ ಸೇವೆಯಿಂದ ಉಡುಪಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಸರಕಾರ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಬೇಕು. ಅದಕ್ಕೆ ಉಡುಪಿಯಿಂದಲೇ ಕೊಡುಗೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಸಾಧನೆಯ ಕಿರುಹೊತ್ತಿಗೆ ಹಾಗೂ ಕೃಷಿ ಮಾಹಿತಿ ಕೈಪಿಡಿಯನ್ನು ಅನಾವರಣ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮಂಗಳೂರು ವಿಭಾಗ ಪ್ರಭಾವಿ ಉದಯ್ ಕುಮಾರ್ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಡುಪಿ ನಗರ ಸಭೆ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಸಾಲಿಯನ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಎಸ್ ಕಲ್ಮಾಡಿ, ರಾಜ್ಯ ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಎಸ್.ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ನಾಯಕ್, ಸಂಚಾಲಕರು ಗಿರೀಶ್ ಅಂಚನ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಉಡುಪಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.