ಶಿರ್ವ: ಕಾರು ಟೆಂಪೋ ಮುಖಾಮುಖಿ ಡಿಕ್ಕಿ- ಇಬ್ಬರು ಮೃತ್ಯು
ಶಿರ್ವ ಡಿ.24 : ಕಾರು ಮತ್ತು ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆ ಹಾಗೂ ಯುವಕ ಮೃತಪಟ್ಟ ಘಟನೆ ಕಟಪಾಡಿ-ಶಿರ್ವ ಮುಖ್ಯರಸ್ತೆಯ ಪಂಜಿಮಾರು ಪಾಲಮೆ ಬಳಿ ಇಂದು ಸಂಜೆ ನಡೆದಿದೆ.
ಕಟಪಾಡಿಯಿಂದ ಶಿರ್ವ ಕಡೆಗೆ ಬರುತ್ತಿದ್ದ ಕಾರಿಗೆ ಶಿರ್ವದಿಂದ ತೆರಳುತ್ತಿದ್ದ ಟೆಂಪೋ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಯುವಕ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಅಪಘಾತಕ್ಕೊಳಗಾದ ಕಾರು ಬೆಂಗಳೂರು ಮೂಲದ ಕಾರು ಎಂದು ತಿಳಿದು ಬಂದಿದ್ದು, ಮೃತರ ಸ್ಪಷ್ಟ ಗುರುತು ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳದಲ್ಲಿ ದೊರೆತ ಲೈಸೆನ್ಸ್ ಪ್ರಕಾರ ಬೆಂಗಳೂರಿನ ಪವನ್ ಬಿ. ಎಸ್ (27) ಎಂದು ತಿಳಿದು ಬಂದಿದೆ.
ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.