ಪಡುಬಿದ್ರೆ: ಜಾಗದ ತಕರಾರು- ಕುಟುಂಬಗಳ ನಡುವೆ ಜಗಳ- ದೂರು ಪ್ರತಿದೂರು ದಾಖಲು

ಪಡುಬಿದ್ರೆ ಡಿ.24 (ಉಡುಪಿ ಟೈಮ್ಸ್ ವರದಿ): ಕಾಪು ತಾಲೂಕಿನ ಬಡಾ ಗ್ರಾಮದಲ್ಲಿ ಜಾಗದ ತಕರಾರಿಗೆ ಸಂಬಂಧಿಸಿ ಸಹೋದರರ ಕುಟುಂಬಳ ನಡುವೆ ಜಗಳ ನಡೆದಿದ್ದು ಪಡುಬಿದ್ರೆ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.

ಈ ಬಗ್ಗೆ ಕಾಪು ತಾಲೂಕಿನ ಬಡಾ ಗ್ರಾಮದ ಮುಮ್ತಾಜ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರ ಗಂಡ ಇಮ್ರಾನ್ ಹಾಗೂ ಹಸನ್ ರವರು ಸಹೋದರ ಸಬಂಧಿಗಳಾಗಿದ್ದು, ಎರಡೂ ಕುಟುಂಬಗಳ ನಡುವೆ ಈ ಮೊದಲಿನಿಂದಲೂ ಜಾಗದ ವಿಚಾರದಲ್ಲಿ ತಕರಾರು ಇದ್ದು, ಹಲವಾರು ಬಾರಿ ಜಗಳವೂ ನಡೆದಿತ್ತು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರುಗಳೂ ಸಹ ದಾಖಲಾಗಿರುತ್ತದೆ. ಡಿ.22 ರಂದು ಮಧ್ಯಾಹ್ನದ ವೇಳೆ ಹಸನ್ ನ ರಿಕ್ಷಾದಲ್ಲಿ ಬಂದಾಗ ಮುಮ್ತಾಜ್ ಅವರ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿರುವುದನ್ನು ಕಂಡು ಬೈದಿರುತ್ತಾರೆ. ನಂತರ ಮುಮ್ತಾಜ್ ಅವರು ತಮ್ಮ ಜಾಗದ ಗಡಿ ಗುರುತಾಗಿ ಕಲ್ಲುಗಳನ್ನು ಇಟ್ಟು, ಸಂಜೆ ಕಾರ್ಯಕ್ರಮದ ನಿಮಿತ್ತ ಅವರ ಮನೆಯವರ ಜೊತೆ ಉಡುಪಿಗೆ ಹೋಗಿದ್ದರು. ಬಳಿಕ ರಾತ್ರಿ ವೇಳೆ ಮನೆಗೆ ಬಂದ ಸಮಯದಲ್ಲಿ ಆರೋಪಿಗಳಾದ ಹಸನ್, ಸಾಬಿರಾ, ಅಲ್ಫಾಜ್, ಹರ್ಷದ್ ರವರು ಮುಮ್ತಾಜ್ ಅವರ ಜಾಗಕ್ಕೆ ಅಕ್ರಮವಾಗಿ ಬಂದು, ಕಲ್ಲು ಇಟ್ಟಿದ್ದು ಏಕೆ ಎಂದು ಹೇಳಿ, ಹಲ್ಲೆ ಮಾಡಿ, ಬೈದು ಕುತ್ತಿಗೆಗೆ ಒತ್ತಿ ಹಿಡಿದಾಗ, ಮುಮ್ತಾಜ್ ಅವರು ಸಾಬಿರಾಳ ಕೈಗೆ ಕಚ್ಚಿರುತ್ತಾರೆ. ಆ ಸಮಯ ಅಲ್ಲಿಗೆ ಬಂದ ಮುಮ್ತಾಜ್ ಅವರ ಬಾವ ಶಫಿನ್‍ನಿಗೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಮಕ್ಕಳನ್ನು ರಿಕ್ಷಾದ ಅಡಿಗೆ ಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಇನ್ನು ಇದೇ ಘಟನೆಗೆ ಸಂಬಂಧಿಸಿ ಸಾಬಿರಾ ಎಂಬವರು ಕೂಡಾ ಪೊಲೀಸರಿಗೆ ಪ್ರತಿದೂರು ನಿಡಿದ್ದು, ಅದರಂತೆ ಡಿ.22 ರಂದು ಆರೋಪಿಗಳಾದ ಇಮ್ರಾನ್ ಮತ್ತು ಶಫಿನ್ ರವರು ಸಾಬಿರಾ ಅವರ ಮನೆಗೆ ಹೋಗುವ ರಸ್ತೆಗೆ ಕಲ್ಲು ಇಟ್ಟಿದ್ದು, ಆ ಕಲ್ಲನ್ನು ಸಾಬಿರಾ ಅವರ ಮಗ ಹರ್ಷದ್ ನು ತೆಗೆದು ಬದಿಗೆ ಇಡುವ ಸಮಯದಲ್ಲಿ ಶಫಿನ್ ನು ಹೊಡೆದು ಹಲ್ಲೆ ಮಾಡಿದ್ದಾನೆ. ಬಳಿಕ ಇಮ್ರಾನ್, ಮುಮ್ತಾಜ್ ರಸ್ತೆಗೆ ಪುನಃ ಕಲ್ಲನ್ನು ಇಡುವ ಸಮಯ ಹರ್ಷದನು ಕಲ್ಲು ಏಕೆ ಇಡುತ್ತೀರಿ ಎಂದು ಕೇಳಿದ್ದಕ್ಕೆ, ಆರೋಪಿಗಳೆಲ್ಲರೂ ಸೇರಿ ಹರ್ಷದ್‍ನಿಗೆ ಹೊಡೆದುದಲ್ಲದೇ, ಅಲ್ಲಿಗೆ ಬಂದ ಆತನ ಅಣ್ಣ ಅಲ್ಫಾಝ್ ಗೂ ಹೊಡೆದು ಕೊಲೆ ಬೆದರಿಕೆ ಹಾಕಿವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಈ ಎರಡೂ ದೂರಿಗೆ ಸಂಬಂಧಿಸಿ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!