ದುಬೈನ `ಎಮಿರೇಟ್ಸ್ ಡ್ರಾ’ ಲಾಟರಿಯಲ್ಲಿ 33 ಕೋಟಿ ಗೆದ್ದ ಭಾರತೀಯ ಮೂಲದ ಚಾಲಕ
ದುಬೈ ಡಿ.24 : ಇಲ್ಲಿನ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಚಾಲಕನಾಗಿ ದುಡಿಯುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ‘ಎಮಿರೇಟ್ಸ್ ಡ್ರಾ’ ಲಾಟರಿಯಲ್ಲಿ ಬರೋಬ್ಬರಿ ರೂ. 33 ಕೋಟಿ ಗೆದ್ದಿದ್ದಾರೆ.
ಅಜಯ್ ಒಗುಲಾ ಎಂಬವರು ಇಷ್ಟು ಮೊತ್ತದ ಲಾಟರಿ ಗೆದ್ದ ವ್ಯಕ್ತಿಯಾಗಿದ್ದಾರೆ.
ಅಜಯ್ ಅವರು, ನಾಲ್ಕು ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ದುಬೈಗೆ ತೆರಳಿದ್ದರು. ಪ್ರಸ್ತುತ ದುಬೈನ ಜ್ಯುವೆಲರಿ ಅಂಗಡಿಯೊಂದರಲ್ಲಿ ವಾಹನ ಚಾಲಕನಾಗಿ ದುಡಿಯುತ್ತಿದ್ದಾರೆ. ಮಾಸಿಕ 3,200 ದಿರ್ಹಂ (ಸುಮಾರು 72,000) ಅವರ ವೇತನವಾಗಿದ್ದು, ಇದೀಗ ಅವರ ವೇತನಕ್ಕಿಂತ ಹಲವು ಪಟ್ಟು ಹೆಚ್ಚು ಹಣ ಅವರಿಗೆ ಲಾಟರಿ ರೂಪದಲ್ಲಿ ಸಿಕ್ಕಿದೆ.
ಇನ್ನು ಹಣ ಗೆದ್ದಿರುವ ಖುಷಿಯನ್ನು ಅಲ್ಲಿನ ಮಾಧ್ಯಮದ ಜೊತೆಗೆ ಹಂಚಿಕೊಂಡಿರುವ ಅಜಯ್ ಅವರು, ‘ನಾನು ಲಾಟರಿ ಗೆದ್ದಿದ್ದೇನೆ ಎನ್ನುವುದನ್ನು ನಂಬಲಿಕ್ಕಾಗುತ್ತಿಲ್ಲ. ಮನೆವರೊಂದಿಗೆ ಈ ವಿಚಾರ ಹೇಳಿದಾಗಲೂ ಅವರು ನಂಬಲಿಲ್ಲ. ಈಗ ಮಾಧ್ಯಮಗಳಲ್ಲಿ ಬರುತ್ತಿದೆ, ಅವರು ನಂಬಲೇಬೇಕು’ ಎಂದು ಹೇಳಿದ್ದಾರೆ. ಹಾಗೂ ಈ ಹಣದಿಂದ ದತ್ತಿ ಸಂಸ್ಥೆ ಸ್ಥಾಪಿಸಿ, ತನ್ನ ಗ್ರಾಮದ ಹಾಗೂ ಪಕ್ಕದ ಗ್ರಾಮದ ಬಡವರಿಗೆ ನೆರವಾಗುತ್ತೇನೆ ಎಂದು ಹೇಳಿದ್ದಾರೆ.