ಸಮಾಜ ಕಲ್ಯಾಣ ಸಚಿವರಿಂದ ಪ.ಜಾತಿ/ಪಂಗಡದ ಮೀಸಲು ಹಣ ದುರುಪಯೋಗ: ಸಚಿವರ ವಜಾಕ್ಕೆ ದಸಂಸ ಆಗ್ರಹ

ಉಡುಪಿ ಡಿ.24 : ಸರಕಾರವು ಪರಿಶಿಷ್ಟ ಜಾತಿ/ಪಂಗಡದವರ ಸಬಲೀಕರಣಕ್ಕಾಗಿ ಮೀಸಲಿರಿಸಿದ ಕೋಟ್ಯಾಂತರ ರೂ. ಅನುದಾನವನ್ನು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದುರ್ಬಳಕೆ ಮಾಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಪ್ರಕರಣ ದಾಖಲಿಸಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಸರಕಾರವು ಪರಿಶಿಷ್ಟ ಜಾತಿ/ಪಂಗಡದವರ ಸಬಲೀಕರಣಕ್ಕಾಗಿ ಮೀಸಲಿರಿಸಿದ ಕೋಟ್ಯಾಂತರ ರೂ. ಅನುದಾನವನ್ನು ಚುನಾವಣೆಗೆ 3 ತಿಂಗಳು ಬಾಕಿ ಇರುವಾಗ ತರಾತುರಿಯಲ್ಲಿ ಪರಿಶಿಷ್ಟ ಜಾತಿಯವರಿಲ್ಲದ ಪ್ರದೇಶಗಳಿಗೆ ರಸ್ತೆ, ಚರಂಡಿ, ಸಮುದಾಯ ಭವನ ಹಾಗೂ ಖಾಸಗಿ ಒಡೆತನದ ದೈವದ ಗುಡಿಗಳಿಗೆ ಬಿಡುಗಡೆಗೊಳಿಸಿ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಒತ್ತಡ ಹೇರಿ ಶಿಫಾರಸು ಮಾಡುವ ಬಗ್ಗೆ ಬೆದರಿಕೆಯೊಡ್ಡಿ ಅನುದಾನಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹಾಗೂ ರಾಜ್ಯ ಸರಕಾರದಲ್ಲಿ ದಲಿತರ ಮೀಸಲು ಹಣ ಕೇವಲ ಶೇ.14ರಷ್ಟು ಮಾತ್ರ ಬಳಕೆಯಾಗಿರುವ ಬಗ್ಗೆ ವರದಿಯಾಗಿದ್ದು, ದಲಿತರ ಸಬಲೀಕರಣದ ಮೀಸಲು ಹಣ ಬಳಕೆ ಮಾಡುವಲ್ಲಿ ವಿಫಲರಾಗಿರುವ ಸಚಿವರು, ಇದೀಗ ಅಡ್ಡದಾರಿ ಹಿಡಿದು ಪರಿಶಿಷ್ಟ ಜಾತಿ/ಪಂಗಡದವರು ಇಲ್ಲದ ಪ್ರದೇಶಗಳಿಗೆ ಕಾಲನಿ ಸಂಪರ್ಕ ರಸ್ತೆ ಎಂದು ಕೋಟ್ಯಾಂತರ ರೂ. ಅನುದಾನ ದುರ್ಬಳಕೆ ಮಾಡುತಿದ್ದಾರೆ. ಕಾಲನಿ ಸಂಪರ್ಕ ರಸ್ತೆ ಎಂದರೆ ರಥಬೀದಿಗೂ ಸಂಪರ್ಕ ರಸ್ತೆಯಾಗುವುದರಿಂದ ಈ ಹಣವನ್ನು ಬಳಸಲು ಸಾಧ್ಯವೇ ಹಾಗೂ ಖಾಸಗಿ ದೈವಸ್ಥಾನಗಳಿಗೆ, ಸಾರ್ವಜನಿಕ ಸಮುದಾಯ ಭವನಗಳಿಗೆ ಅನುದಾನ ಬಳಸುವುದು ಸರಿಯೇ ಎಂದು ಸಚಿವರು ಉತ್ತರಿಸಬೇಕು ಎಂಬುದಾಗಿ ಹೇಳಿದ್ದಾರೆ.

ರೂ.1.50 ಲಕ್ಷದಲ್ಲಿ ವಸತಿ ನಿರ್ಮಾಣ ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು ಸಮಾಜ ಕಲ್ಯಾಣ ಸಚಿವರಾದ ಕೂಡಲೇ ದಲಿತರ ವಸತಿ ಯೋಜನೆಗಳಿಗೆ 5ಲಕ್ಷ ರೂ. ನೀಡುತ್ತೇನೆ ಎಂದು ಹೇಳಿದ ಸಚಿವರು ವಚನಭ್ರಷ್ಟರಾಗಿದ್ದಾರೆ. ಎಲ್ಲಾ ಇಲಾಖೆಗಳಿಗೂ ಎಸ್‍ಇಪಿ/ಟಿಎಸ್‍ಪಿ ಅನುದಾನ ಬಿಡುಗಡೆಯಾಗಿದ್ದರೂ ಹೆಚ್ಚಿನ ಇಲಾಖೆಯವರು ದಲಿತರ ಹೆಸರಿನಲ್ಲಿ ದುರುಪಯೋಗ ಮಾಡಿದ್ದಾರೆ ಎಂದು ದೂರಿದ್ದಾರೆ. ಇದರ ಜೊತೆಗೆ ದಲಿತರಿಲ್ಲದ ಪ್ರದೇಶಗಳಿಗೆ ಕಾಲನಿ ಸಂಪರ್ಕ ರಸ್ತೆ ಎಂದು ಮಾಡಲು ಸಮಜ ಕಲ್ಯಾಣ ಅಧಿಕಾರಿಗಳು ಶಿಫಾರಸು ಮಾಡಿದಲ್ಲಿ ಅಧಿಕಾರಿಗಳ ಮೇಲೆ ದಲಿತ ದೌರ್ಜನ್ಯದಡಿ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗೂ ಆದ್ದರಿಂದ ಅಧಿಕಾರಿಗಳು ಅನುದಾನ ಬಳಕೆಗೆ ಸತ್ಯಾಂಶ ಇರುವ ವರದಿಯನ್ನು ನೀಡಬೇಕು. ಖಾಸಗಿ ಒಡೆತನದ ದೈವಸ್ಥಾನಗಳಿಗೆ ಅನುದಾನ ನೀಡಬಾರದು. ದಲಿತರ ವಸತಿ ಯೋಜನೆಗಳಿಗೆ 5.00 ಲಕ್ಷ ರೂ. ಹಾಗೂ ವಿದ್ಯಾವಂತ ಯುವಕ/ಯುವತಿಯರಿಗೆ ನಿರುದ್ಯೋಗ ಭತ್ಯೆ ಅಥವಾ ಸ್ವಉದ್ಯೋಗ ಯೋಜನೆಗೆ ಬಡ್ಡಿರಹಿತ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!