ಡಿ.26-27: ಅವಲಕ್ಕಿಪಾರೆಯಲ್ಲಿ ಅಂತರಾಷ್ಟ್ರೀಯ ಶಿಲಾಯುಗ ಬಂಡೆ ಚಿತ್ರಗಳ ಹಬ್ಬ
ಉಡುಪಿ ಡಿ.23 (ಉಡುಪಿ ಟೈಮ್ಸ್ ವರದಿ): ಶಿರ್ವ ಮುಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನ ಪುರಾತತ್ವ ಇತಿಹಾಸ ವಿಭಾಗ ವತಿಯಿಂದ ಅಂತರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು, ಉಡುಪಿ ಪ್ರವಾಸೋದ್ಯಮ, ಅರಣ್ಯ ಇಲಾಖೆ, ಇಡೂರು-ಕುಂಜಾಡಿ ಗ್ರಾ.ಪಂ ಆಶ್ರಯದಲ್ಲಿ ಅಂತರಾಷ್ಟ್ರೀಯ ಶಿಲಾಯುಗ ಬಂಡೆ ಚಿತ್ರಗಳ ಹಬ್ಬ (ರಾಕ್ ಆರ್ಟ್ ಫೆಸ್ಟಿವಲ್) ಡಿ. 26 ಮತ್ತು 27ರಂದು ಇಡೂರು-ಕುಂಜಾಡಿಯ ಸಮೀಪದ ಅವಲಕ್ಕಿಪಾರೆಯಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ, ಪುರಾತತ್ವ ವಿದ್ವಾಂಸ ಪ್ರೊ. ಟಿ. ಮುರುಗೇಶಿ ಅವರು ಹೇಳಿದ್ದಾರೆ.
ಈ ಕುರಿತು ಉಡುಪಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಡಿ.26ರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದ್ದು, ಪ್ರಸಿದ್ದ ಕಲಾ ಇತಿಹಾಸಕಾರ ಡಾ. ಇರ್ವಿನ್ ನ್ಯೂಮೇಯರ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೊಂದು ಅತ್ಯಂತ ವಿನೂತನ ಕಾರ್ಯಕ್ರಮವಾಗಿದ್ದು, ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ ಪುರಾತತ್ವ ವಿದ್ವಾಂಸರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಹಾಗೂ ಮೂರು ವರ್ಷಗಳ ಹಿಂದೆಯೇ ಅವಲಕ್ಕಿಪಾರೆಯಲ್ಲಿ ಶಿಲಾಯುಗದ ಬಂಡೆ ಚಿತ್ರಗಳನ್ನು ಗುರುತಿಸಲಾಗಿತ್ತು. ಇದು ವನ್ಯಜೀವಿ ಸಂರಕ್ಷಿತ ಪ್ರದೇಶವಾಗಿದ್ದು, ಅರ್ಧ ಎಕರೆ ವಿಸ್ತೀರ್ಣದಲ್ಲಿ ಬಂಡೆ ಚಿತ್ರಗಳನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಆಸ್ಟ್ರೀಯಾದ ಕಲಾ ಇತಿಹಾಸಕಾರ ಡಾ. ಇರ್ವಿನ್ ನ್ಯೂಮೇಯರ್, ಸಂಶೋಧನಾ ವಿದ್ಯಾರ್ಥಿ ಕ್ರಿಸ್ಟೋಫರ್, ಕಾಲೇಜಿನ ಪುರಾತತ್ವ ವಿದ್ಯಾರ್ಥಿಗಳಾದ ವಿಶಾಲ್ ರೈ, ದಿಶಾಂತ್, ಅರುಣ್ ಉಪಸ್ಥಿತರಿದ್ದರು.