ಮಣಿಪಾಲ: ವೃತ್ತಕ್ಕೆ ಡಾಟಿಎಪೈ ಹೆಸರಿಡುವಂತೆ ಆಗ್ರಹ

ಮಣಿಪಾಲ ಡಿ.23(ಉಡುಪಿ ಟೈಮ್ಸ್ ವರದಿ): ಇಲ್ಲಿನ ಪೋಸ್ಟ್ ಆಫೀಸ್, ಮಣಿಪಾಲ ಬಸ್ ನಿಲ್ದಾಣ ಹಾಗೂ ಅಲೆವೂರು ಮೂಲಕ ಹಾದು ಬರುವ ಮೂರು ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಆರ್.ಎಸ್.ಬಿ ಸಭಾಭವನದ ಬಳಿ ವೃತ್ತ ನಿರ್ಮಿಸಿ, ಆ ವೃತ್ತಕ್ಕೆ ಡಾ. ಟಿಎಪೈ ಅವರ ಹೆಸರನ್ನು ಇಡುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಗ್ರಹಿಸಿದೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮನವಿ ಮಾಡಿಕೊಂಡಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ವಳಕಾಡು ಅವರು, ಆರ್.ಎಸ್.ಬಿ ಸಭಾಭವನದ ಬಳಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಅಂಚೆ ಕಛೇರಿ ಬಳಿಯಿಂದ ಹಾದು ಹೋಗುವ ರಸ್ತೆ, ಹಾಗೂ ಮಣಿಪಾಲ ಬಸ್ಸು ನಿಲ್ದಾಣದಿಂದ ಹಾದು ಬರುವ ರಸ್ತೆ ಮತ್ತು ಅಲೆವೂರಿನಿಂದ ಬರುವ ಮೂರು ಪ್ರಮುಖ ರಸ್ತೆಗಳು ಸಂಧಿಸುತ್ತವೆ. ಸುರಕ್ಷತೆ ಕಾರಣದಿಂದ ಇಲ್ಲೊಂದು ವೃತ್ತ ನಿರ್ಮಿಸಿ, ಆ ವೃತ್ತಕ್ಕೆ ಮಣಿಪಾಲ ನವ ನಿರ್ಮಾಣದಲ್ಲಿ ಪ್ರಮುಖರಾಗಿದ್ದ ಡಾ.ದಿ.ಟಿಎಪೈ ಅವರ ಹೆಸರನ್ನಿಡುವುದು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ತಿಳಿಸಿದ್ದಾರೆ.

ಹಾಗೂ ಟಿ.ಎ.ಪೈ ಅವರು 1943 ರಲ್ಲಿ ಸಿಂಡಿಕೇಟ್ ಬ್ಯಾಂಕ್‍ಗೆ ಡೆಪ್ಯೂಟಿಯಾಗಿ ಸೇರಿ ಬ್ಯಾಂಕಿನಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದರು. ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಭಾರತ ಸರ್ಕಾರ ಪೈ ಅವರನ್ನು ಜೀವ ವಿಮೆಯ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಕೇಂದ್ರ ಸಚಿವರಾಗಿಯೂ ನೇಮಕಗೊಂಡಿದ್ದರು. ಪೈಗಳು ಅಭಿವೃದ್ಧಿಯ ಹರಿಕಾರರಾಗಿದ್ದು, ಅವರ ಸಾಧನೆಯ ಫಲವಾಗಿ ಅವರನ್ನು ಪ್ರಶಸ್ತಿಗಳು ಮತ್ತು ಮನ್ನಣೆಗಳು ಹುಡುಕಿಕೊಂಡು ಬಂದಿದ್ದವು. ಪೈಯವರಿಗೆ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇಂತಹ ಮೇರು ವ್ಯಕ್ತಿತ್ವದ ಸಾಧಕರಾಗಿರುವ ಟಿ.ಎ. ಪೈಗಳ ಹೆಸರನ್ನು ಇಲ್ಲಿ ನಿರ್ಮಿಸುವ ವೃತ್ತಕ್ಕೆ ನಾಮಕರಣ ಮಾಡಬೇಕೆಂಬ ಆಶಯವು ಸಾರ್ವಜನಿಕರದ್ದಾಗಿದೆ. ಈ ಬಗ್ಗೆ ನಗರಾಡಳಿತ ಚಿಂತಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಶೋಕ್ ಪೈ, ಕಮಲಾಕ್ಷ ಪ್ರಭು ಇದ್ದರು.

Leave a Reply

Your email address will not be published. Required fields are marked *

error: Content is protected !!