ಶಬರಿಮಲೆ ಯಾತ್ರಿಕರಿದ್ದ ಮಿನಿ ಬಸ್ ಅಪಘಾತ: ಐವರಿಗೆ ಗಾಯ-ಇಬ್ಬರು ಗಂಭೀರ

ಬೆಳ್ತಂಗಡಿ, ಡಿ.23 : ಚಾಲಕನ ನಿಯಂತ್ರಣ ತಪ್ಪಿದ ಶಬರಿಮಲೆ ಯಾತ್ರಿಕರಿದ್ದ ಮಿನಿಬಸ್ಸೊಂದು ಅಪಘಾತಕ್ಕೊಳಗಾಗಿ ಐವರು ಗಾಯಗೊಂಡ ಘಟನೆ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ನಡೆದಿದೆ.

ಗಾಯಗೊಂಡವರನ್ನು ಶಶಿ, ಜಲಾಧರ, ರಘು, ಬಸವರಾಜ್ ಮತ್ತು ಲೋಕ ಎಂದು ಗುರುತಿಸಲಾಗಿದ್ದು ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ವಾಹನದಲ್ಲಿ ಒಟ್ಟು 21 ಜನ ಪ್ರಯಾಣಿಕರಿದ್ದು, ಇವರು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನಿಂದ ಶಬರಿಮಲೆಗೆ ಯಾತ್ರೆ ಹೊರಟಿದ್ದರು. ಈ ವೇಳೆ ಬೆಳ್ತಂಗಡಿ ಸಮೀಪ ವಾಹನದ ಬ್ರೇಕ್ ಫೈಲ್ ಆಗಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಅಪಘಾತ ನಡೆದ ಜಾಗ ಇಳಿಜಾರಾಗಿದ್ದು, ವಾಹನದ ಬ್ರೇಕ್ ಫೈಲ್ ಆಗಿದೆ ಎಂದು ತಿಳಿದ ಕೂಡಲೇ ಚಾಲಕ ಸಮಯ ಪ್ರಜ್ಞೆ ಮೆರೆದಿರುವ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಚಾಲಕನು ವಾಹನವನ್ನು ರಸ್ತೆ ಪಕ್ಕದ ಪೊದೆಯ ಕಡೆಗೆ ಚಲಿಸುವಂತೆ ಮಾಡಿ ನಿಯಂತ್ರಣಕ್ಕೆ ತಂದಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಒಂದು ಕಡೆ ಆಳ ಕಂದಕ, ಇನ್ನೊಂದೆಡೆ ವಿದ್ಯುತ್ ಕಂಬ ಇದ್ದು ಸ್ವಲ್ಪ ಎಚ್ಚರ ತಪ್ಪಿದ್ದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅಪಘಾತವಾದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳದು ಬಂದಿದೆ.

Leave a Reply

Your email address will not be published. Required fields are marked *

error: Content is protected !!