ಅಟಲ್ ಟ್ರೋಫಿ ಪ್ರೊ ಕಬಡ್ಡಿ ಟ್ರೋಫಿ ಅನಾವರಣ- ಎಂಜಿಎಂ ಕ್ರೀಡಾಂಗಣದಲ್ಲಿ ಭರದ ಸಿದ್ದತೆ

ಉಡುಪಿ ಡಿ.22(ಉಡುಪಿ ಟೈಮ್ಸ್ ವರದಿ): ಅಟಲ್ ಉತ್ಸವದ ಪ್ರಯುಕ್ತ ಡಿ.24 ಮತ್ತು 25 ರಂದು ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆಯಲಿರುವ ಅಟಲ್ ಟ್ರೋಫಿ ಪ್ರೊ ಕಬಡ್ಡಿ ಪಂದ್ಯಕೂಟಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು ಇಂದು ಉಡುಪಿ ಶಾಸಕ ರಘುಪತಿ ಭಟ್ ಅವರು ಟ್ರೋಫಿ ಅನಾವರಣಗೊಳಿಸಿದರು.

ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಹಾಗೂ ಗ್ರಾಮಾಂತರ ವತಿಯಿಂದ ಶಾಸಕರಾದ ಕೆ.ರಘುಪತಿ ಭಟ್ ಅವರ ನೇತೃತ್ವದಲ್ಲಿ ನಡೆಯುವ ಅಟಲ್ ಉತ್ಸವದ ಪ್ರಯುಕ್ತ ಅಟಲ್ ಟ್ರೋಫಿ ಪ್ರೊ ಕಬಡ್ಡಿ ಪಂದ್ಯಕೂಟ ನಡೆಸಲಾಗುತ್ತಿದ್ದು, ಇದರ ವೀಕ್ಷಣೆಗೆ ಸುಮಾರು 6000 ಜನರು ಕುಳಿತು ಕೊಳ್ಳಲು ಗ್ಯಾಲರಿಗಳ ವ್ಯವಸ್ಥೆ ಹಾಗೂ ಸ್ಟೇಡಿಯಂ ನಲ್ಲಿ ಸುಮಾರು 5000 ಜನ ವೀಕ್ಷಿಸಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಒಟ್ಟು ಸುಮಾರು 25 ಸಾವಿರ ಜನ ಈ ಪಂದ್ಯಕೂಟವನ್ನು ವೀಕ್ಷಿಸುವ ನಿರೀಕ್ಷೆ ಮಾಡಲಾಗಿದ್ದು, ಅಟಲ್ ಉತ್ಸವಕ್ಕಾಗಿ ಉಡುಪಿ ನಗರವನ್ನು ವಿದ್ಯುದೀಪಗಳಿಂದ ಅಲಂಕರಿಸಲಾಗಿದೆ. ಮಾತ್ರವಲ್ಲದೆ ಕಲ್ಸಂಕದಿಂದ ಎಂಜಿಎಂ ವರೆಗೆ ಪಕ್ಷದ ಧ್ವಜ ಮತ್ತು ಪತಾಕೆಗಳು ಮತ್ತು ಬ್ಯಾನರ್ ಗಳನ್ನು ಅಳವಡಿಸಲಾಗಿದೆ.

ಈ ಕಬ್ಬಡಿ ಪಂದ್ಯ ಕೂಟವನ್ನು ಕೇಂದ್ರ ಯುವಜನ, ಕ್ರೀಡೆ ಹಾಗೂ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವ ಅನುರಾಗ್ ಸಿಂಗ್ ಠಾಕೂರ್ ರವರು ನೆರವೇರಿಸಲಿದ್ದಾರೆ. ಕರ್ನಾಟಕ ಸರಕಾರದ ಕ್ರೀಡೆ ಮತ್ತು ಯುವ ಜನ ಸಬಲೀಕರಣ ಸಚಿವ ಡಾ.ಕೆ ಸಿ ನಾರಾಯಣ ಗೌಡ ರವರು ಪಂದ್ಯಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಹಾಗೂ ಈ ಪಂದ್ಯಾಕೂಟದಲ್ಲಿ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಾದ ದೆಹಲಿ, ಹರಿಯಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳ ಒಟ್ಟು 12 ತಂಡಗಳು ಭಾಗವಹಿಸಲಿದ್ದು ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗು ನಾಲ್ಕನೇ ಸ್ನಾನಗಳ ಬಹುಮಾನವನ್ನು ಅನುಕ್ರಮವಾಗಿ 1 ಲಕ್ಷ ರೂಪಾಯಿ, 75 ಸಾವಿರ ರೂಪಾಯಿ, 50 ಸಾವಿರ ರೂಪಾಯಿ ಹಾಗೂ 25 ಸಾವಿರ ರೂಪಾಯಿ ಬಹುಮಾನಗಳನ್ನು ಪ್ರಶಸ್ತಿ ಫಲಕಗಳ ಜೊತೆಗೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!