ಕರಾವಳಿಯ ಜನಪದ ಕ್ರೀಡೆ ಕಂಬಳ ಮತ್ತೆ ಸಂಕಷ್ಟದಲ್ಲಿ
ಮಂಗಳೂರು ಡಿ.22: ಪ್ರಾಣಿ ದಯಾ ಸಂಘದವರು ಕಂಬಳ ಕೂಟ ನಿಷೇಧಿಸುವಂತೆ ಮತ್ತೆ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದು, ಇದೀಗ ಮತ್ತೆ ಕರಾವಳಿಯ ಜನಪದ ಕ್ರೀಡೆ ಕಂಬಳ ಸಂಕಷ್ಟದಲ್ಲಿದೆ.
ಕಂಬಳದಲ್ಲಿ ಪ್ರಾಣಿ ಹಿಂಸೆ ಮಾಡಲಾಗುತ್ತಿದೆ ಎಂಬುದು ಪ್ರಾಣಿ ದಯಾ ಸಂಘದವರ ಹಲವು ಸಮಯದ ಆರೋಪ. ಈ ಹಿಂದೆ ಕಂಬಳಕ್ಕೆ ನಿಷೇಧದ ಆತಂಕ ಎದುರಾದಾಗ ರಾಜ್ಯ ಸರ್ಕಾರ ಕಾನೂನು ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ಸರ್ಕಾರ ಮಂಡಿಸಿದ್ದ ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಹಾಕುವ ಮೂಲಕ ಕಂಬಳ ಕ್ರೀಡೆಗೆ ಅವಕಾಶ ಮಾಡಿಕೊಟ್ಟಿದ್ದರು. ಆ ಬಳಿಕ ಕರಾವಳಿಯಲ್ಲಿ ನಿರಾತಂಕವಾಗಿ ಕಂಬಳ ಕ್ರೀಡೆ ನಡೆಯುತಿತ್ತು. ಆದ್ರೆ ಇದೀಗ ಮತ್ತೆ ಪ್ರಾಣಿ ದಯಾ ಸಂಘ ಪೇಟಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಕಂಬಳವನ್ನು ನಿಷೇಧಿಸುವಂತೆ ಮೇಲ್ಮನವಿ ಸಲ್ಲಿಸಿದ್ದಾರೆ.
ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹ ತಕರಾರು ಅರ್ಜಿ ಸಲ್ಲಿಸಿದ್ದು, ಕಂಬಳ ಸಮಿತಿಗಳ ಪರವಾಗಿ ಉಪ್ಪಿನಂಗಡಿಯ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಸಹ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್‍ನ ಸಾಂವಿಧಾನಿಕ ಪೀಠ ತೀರ್ಪು ಕಾಯ್ದಿರಿಸಿದೆ.
ಕಂಬಳ ಕೂಟಕ್ಕೆ ಪ್ರಾಚೀನ ಇತಿಹಾಸವಿದ್ದು, ಮಕ್ಕಳಂತೆ ಕೋಣಗಳನ್ನು ಪ್ರೀತಿಯಿಂದ ಸಾಕಿ ಸಲಹಲಾಗುತ್ತದೆ. ಕಂಬಳ ನಿಷೇಧವಾಗಬಾರದು ಎಂಬುದು ಕಂಬಳ ಪ್ರೇಮಿಗಳ ಒತ್ತಾಯವಾಗಿದೆ. ಆದರೆ ಕಂಬಳದ ಕೋಣಗಳು ಓಟಕ್ಕೆ ಯೋಗ್ಯವಾದ ಪ್ರಾಣಿಗಳಲ್ಲ, ಹೀಗಿದ್ದರೂ ರಾತ್ರಿ ಹಗಲೆನ್ನದೆ 48 ಗಂಟೆಗಳ ಕಾಲ ಕಂಬಳದ ಕೂಟದಲ್ಲಿ ಕೋಣಗಳನ್ನು ಓಡಿಸಲಾಗುತ್ತದೆ. ಬೆತ್ತದಿಂದ ಕೋಣಗಳಿಗೆ ಹೊಡೆದು ಹಿಂಸೆ ನೀಡಲಾಗುತ್ತಿದೆ ಎಂಬುದು ಪೇಟಾದವರ ಆರೋಪವಾಗಿದೆ. ಹೀಗಾಗಿ ಕಂಬಳ, ಜಲ್ಲಿಕಟ್ಟು, ಎತ್ತಿನಗಾಡಿ ಕ್ರೀಡೆಯ ಸಂದರ್ಭದಲ್ಲಿ ಕಾನೂನು ಉಲ್ಲಂಘನೆಯಾಗುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿಲ್ಲ ಎಂದೂ ಪೇಟಾ ಸಂಸ್ಥೆಯವರು ತಕರಾರು ತೆಗೆದು, ಕಾನೂನು ತಿದ್ದುಪಡಿಯ ಸಾಂವಿಧಾನಿಕತೆಯನ್ನು ಸಹ ಪ್ರಶ್ನಿಸಿ ದಾವೆ ಹೂಡಿದ್ದಾರೆ ಎಂದು ತಿಳಿದು ಬಂದಿದೆ.