ಕಾರ್ಕಳ: ಮನೆ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳ ಬಂಧನ
ಕಾರ್ಕಳ ಡಿ.21(ಉಡುಪಿ ಟೈಮ್ಸ್ ವರದಿ): ತಾಲೂಕಿನ ಕಲ್ಯಾ ಗ್ರಾಮದಲ್ಲಿ ಡಿ.3 ರಂದು ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.
ದ.ಕ ಜಿಲ್ಲೆಯ ಬಂಟ್ವಾಳದ ಪ್ರಸಾದ್ ಯಾನೆ ಪಚ್ಚು (34), ಕಾರ್ಕಳದ ಕಲ್ಯಾ ಗ್ರಾಮದ ಶಿಬಾ (39) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ ಪೊಲೀಸರು, ಕಳ್ಳತನವಾಗಿದ್ದ 9,75,000 ರೂ. ಮೌಲ್ಯದ 216 ಗ್ರಾಂ ಬಂಗಾರದ ಒಡವೆಗಳು ಮತ್ತು 77 ಗ್ರಾಂ ತೂಕದ ಬೆಳ್ಳಿಯ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಪ್ರಸಾದ್ ಎಂಬಾತನ ಮೇಲೆ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಮೂಡಬಿದ್ರಿ, ಕಾರ್ಕಳ ನಗರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ಹಾಗೂ ಮೂಡಬಿದ್ರೆ ಠಾಣೆಯಲ್ಲಿ ಸುದರ್ಶನ ಜೈನ್ ಎಂಬವರ ಕೊಲೆ ಮತ್ತು ವೇಣೂರು ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಸದ್ಯ ಬಂಧಿತ ಇಬ್ಬರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಡಿ.3 ರಂದು ರಾತ್ರಿ ವೇಳೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಲ್ಯಾ ಗ್ರಾಮದ ಉಷಾ ಜಗದೀಶ್ ಅಂಚನ್ ಎಂಬವರ ಮನೆಯ ಬಾಗಿಲನ್ನು ಮುರಿದು ಒಳ ನುಗ್ಗಿದ ಕಳ್ಳರು ಕೊಠಡಿಯಲ್ಲಿದ್ದ ಗೋದ್ರೇಜ್‍ನ ಬೀಗ ಮುರಿದು ಅದರೊಳಗಿದ್ದ 9,75,000 ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡ ಕಾರ್ಕಳ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್‍ರವರ ತಂಡವು ಇಂದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಹಾಕೆ ಮಚ್ಚೀಂದ್ರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ರವರ ನಿರ್ದೇಶನದಂತೆ ಕಾರ್ಕಳ ಉಪವೀಬಾಗದ ಡಿ.ವೈ,ಎಸ್.ಪಿ ವಿಜಯಪ್ರಸಾದ್ ರವರ ಮಾರ್ಗದರ್ಶನದಲ್ಲಿ, ಕಾರ್ಕಳ ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರ ನೇತೃತ್ವದಲ್ಲಿ ಕಾರ್ಕಳ ಗ್ರಾಮಾಂತರ ಠಾಣಾ ಪಿಎಸ್‍ಐ ತೇಜಸ್ವಿ ಟಿ ಐ ಮತ್ತು ಸಿಬ್ಬಂದಿಯವರಾದ ಗಿರೀಶ್, ಪ್ರಶಾಂತ್, ವಿಶ್ವನಾಥ್, ಸುಂದರ್, ವಿದ್ಯಾ, ಗಣೇಶ್ ರೆಡ್ಡಿ, ರುಕ್ಮಿಣಿ, ಶ್ಯಾಮ್, ಮಹಂತೇಶ, ಈರಣ್ಣ, ಆಶೋಕ್ ಪಡುಬಿದ್ರೆ ಮತ್ತು ಸತೀಶ್ ಅವರು ಭಾಗವಹಿಸಿದ್ದರು. ಹಾಗೂ ಎಸ್.ಪಿ ರವರ ಕಛೇರಿಯ ಸಿಬ್ಬಂದಿಯವರಾದ ಶಿವಾನಂದ ಹಾಗೂ ದಿನೇಶ್‍ರವರು ಪೊಲೀಸರ ಕಾರ್ಯಾಚರಣೆಗೆ ಸಹಕರಿಸಿದ್ದರು ಎಂದು ತಿಳಿದು ಬಂದಿದೆ.