ಅಮಾಸೆಬೈಲು: ಪಂಚಾಯತ್ ರಸ್ತೆ ಅಗೆದು ಸಾರ್ವಜನಿಕ ಸಂಚಾರಕ್ಕೆ ಅಡ್ಡಿ
ಉಡುಪಿ ಡಿ.21(ಉಡುಪಿ ಟೈಮ್ಸ್ ವರದಿ): ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ಪಂಚಾಯತ್‍ನ ಬಳ್ಮನೆ ಎಂಬಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಉದ್ದೇಶಕ್ಕಾಗಿ ನಿರ್ಮಿಸಿದ ರಸ್ತೆಯನ್ನು ಅಕ್ರಮಿಸಿಕಂದಕ ನಿರ್ಮಿಸಿ ಹಾಳುಗೆಡವಿರುವವರ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳುವಂತೆ ಹಾಗೂ ರಸ್ತೆಯನ್ನು ಸರಿಪಡಿಸುವಂತೆ ಗ್ರಾಮಸ್ಥರು ಅಭಿವೃದ್ಧಿ ಅಧಿಕಾರಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಗ್ರಾಮಸ್ಥರಾದ ದಿನಕರ ಶೆಟ್ಟಿ ಅವರು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ಪಂಚಾಯತ್‍ನ ಬಳ್ಮನೆ ಎಂಬಲ್ಲಿ ಸುಮಾರು 10 ಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿದೆ. ಇಲ್ಲಿನ ನಿವಾಸಿಗಳಿಗೆ ತಮ್ಮ ಮನೆಗಳಿಗೆ ತೆರಳಲು ಬಳ್ಮನೆ ಬೈಲ್ ನಿಂದ ಬಳ್ಮನೆ ಹತ್ರಪಾಲು ಇಲ್ಲಿಯವರೆಗೆ ಗ್ರಾಮ ಪಂಚಾಯತ್ ನ ಮಣ್ಣು ರಸ್ತೆ ಸಂಪರ್ಕವಿದ್ದು, ಈ ರಸ್ತೆಯನ್ನೇ ಅನೇಕ ವರ್ಷಗಳಿಂದ ಸಂಪರ್ಕ ರಸ್ತೆಯಾಗಿ ನಿವಾಸಿಗಳು ಉಪಯೋಗಿಸುತ್ತಿದ್ದಾರೆ. ಅಲ್ಲದೆ ಈ ರಸ್ತೆಯ ಕಾಮಗಾರಿಗಾಗಿ ಅಮಾಸೆಬೈಲು ಗ್ರಾಮ ಪಂಚಾಯತ್‍ನ 14ನೇ ಹಣಕಾಸಿನ ಯೋಜನೆಯಡಿ 2020ನೇ ಸಾಲಿನಲ್ಲಿ ಸುಮಾರು 54,000 ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿತ್ತು.
ಪ್ರಸ್ತುತ ಈ ರಸ್ತೆಯ ಅಭಿವೃದ್ಧಿಗೆ ಜಿಲ್ಲಾ ಪಂಚಾಯತ್ ವತಿಯಿಂದ 5 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ ಈ ರಸ್ತೆಯನ್ನು ಅ.8 ರಂದು ಬಳ್ಮನೆ ಪರಿಸರದ ವ್ಯಕ್ತಿಗಳಾದ ಅವಿನಾಶ ಹೆಗ್ಡೆ, ಬಿ.ಕೆ ಸತೀಶ ಶೆಟ್ಟಿ, ಅಶೋಕ ಶೆಟ್ಟಿ ಎಂಬವರು ಏಕಾಏಕಿ ಅಕ್ರಮವಾಗಿ ಸರ್ಕಾರಿ ಸ್ಥಳದಲ್ಲಿ ಹಾದು ಹೋಗಿರುವ ಗ್ರಾಮಪಂಚಾಯತ್ ನ ಅನುದಾನಿತ ರಸ್ತೆಯನ್ನು ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಮೂಲಕ ಅಗೆದು, ರಸ್ತೆಯ ಮದ್ಯ ಕಂದಕ ನಿರ್ಮಿಸಿ ರಸ್ತೆಯನ್ನು ಸಂಪೂರ್ಣ ಹಾಳುಗೆಡವಿದ್ದಾರೆ. ಅಲ್ಲದೆ ಸರ್ಕಾರಿ ಸ್ಥಳವನ್ನು ಅಕ್ರಮವಾಗಿ ಭೂ ಸ್ವಾಧೀನ ಮಾಡಿಕೊಂಡು ಈ ರಸ್ತೆಯಲ್ಲಿ ತಿರುಗಾಡದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾಗೂ ಈ ರಸ್ತೆಯನ್ನು ಅಕ್ರಮವಾಗಿ ಹಾಳುಗೆಡವಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ರಸ್ತೆಯನ್ನು ದುರಸ್ಥಿ ಮಾಡಲು ಅಗತ್ಯವಿರುವ ಸಂಪೂರ್ಣ ವೆಚ್ಚವನ್ನು ಈ ವ್ಯಕ್ತಿಗಳಿಂದ ವಸೂಲಿ ಮಾಡಿ ರಸ್ತೆ ಸಂಪರ್ಕ ಸರಿಪಡಿಸಿಕೊಡಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ರವಿಕರ ಶೆಟ್ಟಿ, ನಾರಾಯಣ ಶೆಟ್ಟಿ ಅವರು ಉಪಸ್ಥಿತರಿದ್ದರು.