ಮುರುಗೇಶ್ ನಿರಾಣಿ ಪೇಮೆಂಟ್ ಮಿನಿಸ್ಟರ್: ಯತ್ನಾಳ್
ಬೆಂಗಳೂರು ಡಿ.21 : ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಪೇಮೆಂಟ್ ಕೋಟಾದಲ್ಲಿ ಮಂತ್ರಿಯಾದವರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಪೇ ಸಿಎಂ(Pay CM) ಮಾಡಿದ್ರಾ? ಪೇ ಪಿಎಂ(Pay PM) ಮಾಡಿದ್ರಾ ? ಎಂದು ಪ್ರಶ್ನಿಸಿದೆ.
ವಚನಾನಾಂದ ಸ್ವಾಮೀಜಿ ಕುರಿತು ನೀವು ಮಾತನಾಡಿದ್ದಕ್ಕೆ ಮುರುಗೇಶ್ ನಿರಾಣಿ ಯಾರ ಬಗ್ಗೆಯೂ ಈ ರೀತಿ ಮಾತನಾಡಬಾರದು ಎಂದು ನಿಮಗೆ ಹೇಳಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಆ ವ್ಯಕ್ತಿಯ ಬಗ್ಗೆ ಮಾತನಾಡಲೇ ಬಾರದು. ನಾವು ಸಣ್ಣವರಾಗುತ್ತೇವೆ, ಅವನು ಪೇಮೆಂಟ್ ಗಿರಾಕಿ, ಪೇಮೆಂಟ್ ಕೋಟಾದಲ್ಲಿ ಮಿನಿಸ್ಟರ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಮುರುಗೇಶ್ ನಿರಾಣಿ ಪೇಮೆಂಟ್ ಕೋಟಾದಲ್ಲಿ ಮಂತ್ರಿಯಾದವರು ಎಂಬ ಯತ್ನಾಳ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ ನಿರಾಣಿಯವರು Pay CM ಮಾಡಿದಾರಾ?, Pay PM ಮಾಡಿದಾರಾ?, ಯಾರಿಗೆ?, ಎಷ್ಟು ಹಣ ನೀಡಿದ್ದಾರೆ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಹಾಗೂ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಪೇಮೆಂಟ್ ಆಧಾರದಲ್ಲಿಯೇ ನಡೆಯುತ್ತಿರುವುದು ಎಂಬುದು ಇತ್ತೀಚಿನ #BJPvsBJP ಕಿತ್ತಾಟದಲ್ಲಿ ಹೊರಬರುತ್ತಿದೆ ಎಂದು ಹೇಳಿದೆ.