ಕೋವಿಡ್ ರೂಪಾಂತರಿ ವೈರಸ್ ಹಿನ್ನೆಲೆ ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ : ಡಾ.ಕೆ.ಸುಧಾಕರ್

ಬೆಳಗಾವಿ ಡಿ.21 : ಕೋವಿಡ್ ಸೋಂಕಿನ ರೂಪಾಂತರಿ ವೈರಸ್‍ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಸೋಂಕಿಗೊಳಗಾಗುವವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸ್ ಪರೀಕ್ಷೆಗೆ ನೀಡಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಇದಕ್ಕೆ ಈಗಾಗಲೇ ಕ್ರಮ ವಹಿಸಲಾಗಿದೆ. ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಕೆಲ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗದರ್ಶನ ಕೂಡ ಪಡೆದುಕೊಂಡು ಕ್ರಮ ವಹಿಸಲಾಗುವುದು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗುವುದು. ಹಾಗೆಯೇ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಲಾಗುವುದು. ಅಲ್ಲದೆ ಕೋವಿಡ್ ಹಿನ್ನೆಲೆಯಲ್ಲಿ ಕೆಲ ಮುನ್ನೆಚ್ಚರಿಕೆಯ ಕ್ರಮಗಳನ್ನು ವಹಿಸಬೇಕಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅತಿ ಹೆಚ್ಚು ಪ್ರಯಾಣಿಕರು ಬರುತ್ತಿದ್ದಾರೆ. ಇಲ್ಲಿಯೂ ನಿಗಾ ಇರಿಸಲು ಆರಂಭಿಸಲಾಗುವುದು. ಎರಡು ಡೋಸ್‍ಗಳಲ್ಲಿ ಶೇ.100 ರಷ್ಟು ಸಾಧನೆಯಾಗಿದೆ. ಆದರೆ ಅನೇಕರು ಮೂರನೇ ಡೋಸ್ ಪಡೆದಿಲ್ಲ. ಅಂತಹವರು ಮುಂದೆ ಬಂದು ಮೂರನೇ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

ಹಾಗೂ ಚೀನ, ಜಪಾನ್ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್‍ನ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಚೀನದಲ್ಲಿ ಆಸ್ಪತ್ರೆ ದಾಖಲಾತಿ ಕೂಡ ಹೆಚ್ಚಾಗುತ್ತಿದೆ. ಆದ್ದರಿಂದ ಲಸಿಕೆಯ ಮೂರನೇ ಡೋಸ್ ಪಡೆಯಲು ಆದ್ಯತೆ ನೀಡಬೇಕಿದೆ ಎಂದರು.

Leave a Reply

Your email address will not be published. Required fields are marked *

error: Content is protected !!