ಉಡುಪಿಯ ಕುಂಜಿಬೆಟ್ಟುವಿನ ಮನೆಯಲ್ಲಿ ಕಳ್ಳತನ: ಓರ್ವ ಆರೋಪಿ ಬಂಧನ
ಉಡುಪಿ ಡಿ.21 : ಕೆಲ ದಿನಗಳ ಹಿಂದೆ ಉಡುಪಿಯ ಶಿವಳ್ಳಿಯಲ್ಲಿ ಕುಂಜಿಬೆಟ್ಟಿನ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಮೂಲದ ಆರೋಪಿಯೋರ್ವನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಆಶ್ರಯ ಬಡಾವಣೆ ನಿವಾಸಿ ಸಾಧಿಕ್ ಉಲ್ಲಾ (35) ಬಂಧಿತ ಆರೋಪಿ.
ಬಂಧಿತನಿಂದ ಶಿಕಾರಿಪುರದ ತನ್ನ ಮನೆಯಲ್ಲಿಟ್ಟಿದ್ದ ಕಳವುಮಾಡಿಕೊಂಡು ಹೋದ 4,35,000 ರೂ. ಮೌಲ್ಯದ ವಜ್ರದ ಉಂಗುರ, ಚಿನ್ನಾಭರಣ, ಬೆಳ್ಳಿ ಗಟ್ಟಿ, ಬೆಳ್ಳಿ ಆಭರಣ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಳ್ಳಿ ಕುಂಜಿಬೆಟ್ಟು ನಿವಾಸಿಯೊಬ್ಬರ ಮನೆಯಲ್ಲಿ ಡಿ.11ರಂದು ರಾತ್ರಿ ಕಳ್ಳತನ ನಡೆದಿದ್ದು, ಡಿ.12 ರಂದು ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯ ಹಿಂಬದಿ ಬಾಗಿಲಿನ ಮೂಲಕ ಒಳನುಗ್ಗಿದ್ದ ಕಳ್ಳರು ಅಲ್ಮೇರಾ ಬಾಗಿಲು ಮುರಿದು ಲಾಕರಿನಲ್ಲಿದ್ದ 4 ಲಕ್ಷಕ್ಕೂ ಅಧಿಕ ರೂ. ಮೌಲ್ಯದ ಒಂದು ವಜ್ರದ ಉಂಗುರ, ಚಿನ್ನದ ಜುಮುಕಿಗಳು, ಚಿನ್ನದ ಕಾಯಿನ್, 2 ಬೆಳ್ಳಿ ತಟ್ಟೆ, ಚಿನ್ನದ ಲೇಪನವಿರುವ ಆಭರಣ ಕಳವು ಮಾಡಲಾಗಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಡುಪಿ ನಗರ ಠಾಣೆ ಪೊಲೀಸರು ಉಡುಪಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚ್ಚೀಂದ್ರ ಹಾಕೆ ಅವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ, ಉಡುಪಿ ಉಪವಿಭಾಗದ ಡಿವೈಎಸ್ಪಿ ಸುಧಾಕರ್ ಸದಾನಂದ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾಗಿ ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಮಹೇಶ್ ಟಿ.ಎಂ, ವಾಸಪ್ಪ ನಾಯ್ಕ್, ಸಿಬ್ಬಂದಿಗಳಾದ ಸತೀಶ್ ಬೆಳ್ಳೆ, ಆನಂದ್ ಎಸ್., ರಿಯಾಝ್ ಅಹ್ಮದ್, ವಿಶ್ವನಾಥ್ ಶೆಟ್ಟಿ, ಕಿರಣ್ ಕೆ., ಶಿವಕುಮಾರ್, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ದಿನೇಶ್, ನಿತಿನ್ ಕುಮಾರ್ ಭಾಗವಹಿಸಿದ್ದರು.