ಸಮ್ಮೇದ ಪ್ರವಾಸಿತಾಣ ಆದೇಶ ರದ್ದುಪಡಿಸಲು ಜೈನರ ಆಗ್ರಹ
ಉಡುಪಿ ಡಿ.21(ಉಡುಪಿ ಟೈಮ್ಸ್ ವರದಿ): ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಜೈನ ಧರ್ಮದ ಪರಮೋಚ್ಚ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಜಾರ್ಖಂಡ್ ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆಯ ಮುಖಾಂತರ ಪ್ರವಾಸಿತಾಣ ಎಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಇಂದು ಜೈನ್ ಮಿಲನ್ ಮತ್ತು ಜೈನ ವಕ ಸಂಸ್ಥೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪ್ರತಿಭಟನಾಕಾರರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಮ್ಮೇದ ಶಿಖರ್ಜಿಯನ್ನು ಜೈನರ ತೀರ್ಥಕ್ಷೇತ್ರವೆಂದು ಜಾವ ವಂಶಸ್ಥರು, ಬ್ರಿಟೀಷರು ಹೇಳಿದ್ದರು. ಆದರೆ ಆದರೆ ಸ್ವಾತಂತ್ರ್ಯ ನಂತರದ ಬಂದ ಸರಕಾರಗಳು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಜೈನರ ತೀರ್ಥಕ್ಷೇತ್ರದ ವಿಚಾರದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುತ್ತಿವೆ. ಜೈನರ ಪ್ರತಿರೋಧದ ನಡುವೆಯೂ ಜಾರ್ಖಂಡ್ ರಾಜ್ಯ ಸರಕಾರ ಈ ಪವಿತ್ರ ಸ್ಥಳವನ್ನು ಪುವಾಸಿತಾಣವನ್ನಾಗಿ ಘೋಷಿಸುವ ಮೂಲಕ ಅಪವಿತ್ರಗೊಳಿಸುವ ಹುನ್ನಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಹಾಗೂ ಭಾರತದ ಸಂವಿಧಾನದ ಪ್ರಕಾರ ಭಾರತದಲ್ಲಿ ಜೈನರು ಹೊಂದಿರುವ ಮಹಾತೀರ್ಥಕ್ಷೇತ್ರದ ಪಾವಿತ್ರತೆಯನ್ನು ರಕ್ಷಿಸುವುದು ಭಾರತ ಸರಕಾರದ ಕರ್ತವ್ಯವಾಗಿದೆ. ಹೇಗೆ ಅನ್ಯರ ತೀರ್ಥಕ್ಷೇತ್ರಗಳ ಬಗೆಗೆ ಸರಕಾರ ಕಾಳಜಿಯನ್ನು ಹೊಂದಿದೆಯೋ ಅದೇ ರೀತಿ ಜೈನರ ಸಮ್ಮೇದ ಶಿಖರ್ಜಿಯ ಕಾಳಜಿಯನ್ನು ಭಾರತ ಸರಕಾರ ವಹಿಸಿಕೊಳ್ಳಬೇಕಾದದ್ದು ಕರ್ತವ್ಯವಾಗಿದೆ. ಆದ್ದರಿಂದ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿತಾಣ ಎಂದು ಘೋಷಿಸಿರುವ ಆಜ್ಞೆಯನ್ನು ರದ್ದುಪಡಿಸುವಂತೆ ಜಾಖರ್ಂಡ್ ಆಡಳಿತಕ್ಕೆ ಆದೇಶ ನೀಡಬೇಕು ಹಾಗೂ ಸಮ್ಮೇದ ಶಿಖರ್ಜಿಯ ಗೌರವಕ್ಕೆ ಚ್ಯುತಿ ಬಾರದಂತೆ ಮುನ್ನೆಚ್ಚರಿಗೆ ವಹಿಸುವುದಾಗಿ ಲಿಖಿತ ಭರವಸೆ ನೀಡಬೇಕು ಮತ್ತು ಭವಿಷ್ಯದಲ್ಲಿಯೂ ಜೈನರ ತೀರ್ಥಕ್ಷೇತ್ರಕ್ಕೆ ಯಾವುದೇ ತೊಂದರೆಯಾಗದ ಇರಲಿ ಎಂಬ ಕಾನೂನನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಪ್ರತಿಭಟನೆ ಬಳಿಕ ಜಾರ್ಖಂಡ್ ನ ಜೈನ ಧರ್ಮದ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿತಾಣ ಎಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಹಾಗೂ ರಾಷ್ಟ್ರ ಪತಿಯವರಿಗೆ ಮನವಿ ಸಲ್ಲಿಸಲಾಯಿತು.