ಹೆಣ್ಣು ಮಕ್ಕಳು ಇನ್ನು ಮುಂದೆ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆಯುವಂತಿಲ್ಲ-ತಾಲಿಬಾನ್
ಅಫ್ಘಾನಿಸ್ತಾನ ಡಿ.21 : ಅಫ್ಘಾನ್ ನ ವಿಶ್ವವಿದ್ಯಾಲಯಗಳಿಗೆ ಹೆಣ್ಣು ಮಕ್ಕಳ ಪ್ರವೇಶವನ್ನು ನಿಷೇಧಿಸಲಾಗಿದ್ದು, ಹೆಣ್ಣು ಮಕ್ಕಳು ಇನ್ನು ಮುಂದೆ ವಿಶ್ವವಿದ್ಯಾಲಯಕ್ಕೆ ತೆರಳಿ ಶಿಕ್ಷಣ ಪಡೆಯುವಂತಿಲ್ಲ ಎಂದು ತಾಲಿಬಾನ್ ಹೇಳಿದೆ.
ಅಫ್ಘಾನಿಸ್ತಾನದ ಮಾಧ್ಯಮದ ವರದಿ ಪ್ರಕಾರ, ಉನ್ನತ ಶಿಕ್ಷಣ ಸಚಿವಾಲಯವು ಮುಂದಿನ ಪ್ರಕಟಣೆಯ ತನಕ ದೇಶದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣವನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ ಎಂದು ತಿಳಿಸಲಾಗಿದೆ.
ಈ ಬಗ್ಗೆ ತಾಲಿಬಾನ್ ಸರ್ಕಾರದ ಸಭೆಯ ನಂತರ ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದು, ಉನ್ನತ ಶಿಕ್ಷಣ ಸಚಿವಾಲಯದ ವಕ್ತಾರ ಜಿಯಾವುಲ್ಲಾ ಹಶ್ಮಿ ಅವರು ಹಂಚಿಕೊಂಡಿರುವ ಪತ್ರದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಿಶ್ವವಿದ್ಯಾಲಯಗಳು ಇದನ್ನು ಶೀಘ್ರವಾಗಿ ಜಾರಿಗೆ ತರುವಂತೆ ಕೇಳಿಕೊಂಡಿವೆ.
ಕಳೆದ ವರ್ಷ ಆಗಸ್ಟ್ ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿತ್ತು, ನಂತರ ನಾಗರಿಕರ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ. ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರಿಗೆ ಕಟ್ಟುನಿಟ್ಟಾದ ನಿಬಂಧನೆಗಳನ್ನು ವಿಧಿಸಲಾಗಿದೆ. ಇಸ್ಲಾಮಿಸ್ಟ್ ಗುಂಪು ಎಲ್ಲಾ ಮಹಿಳೆಯರನ್ನು ನಾಗರಿಕ ಸೇವೆಯಲ್ಲಿ ನಾಯಕತ್ವದ ಸ್ಥಾನಗಳಿಂದ ವಜಾಗೊಳಿಸಿತು ಮತ್ತು ಹೆಚ್ಚಿನ ಪ್ರಾಂತ್ಯಗಳಲ್ಲಿ ಹುಡುಗಿಯರನ್ನು ಮಾಧ್ಯಮಿಕ ಶಾಲೆಗೆ ಹೋಗುವುದನ್ನು ನಿರ್ಬಂಧಿಸಿತು.