ಉಡುಪಿ: ಹಣಕ್ಕಾಗಿ ಸ್ನೇಹಿತನನ್ನೇ ಚೂರಿ ಇರಿದು ಕೊಲೆ: ಆಪರಾಧಿಗೆ ಜೀವಾವಧಿ ಶಿಕ್ಷೆ
ಉಡುಪಿ ಡಿ.20 (ಉಡುಪಿ ಟೈಮ್ಸ್ ವರದಿ): ಐದು ವರ್ಷಗಳ ಹಿಂದೆ ಚೇರ್ಕಾಡಿ ಗ್ರಾಮದ ಪೇತ್ರಿಯ ಯುವಕ ಮಂಡಲದ ಬಳಿ ಹಣಕ್ಕಾಗಿ ಚೂರಿ ಇರಿದು ಸ್ನೇಹಿತನನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿ ಪ್ರಶಾಂತ್ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 60ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಇಂದು ತೀರ್ಪು ನೀಡಿದೆ.
ಚೇರ್ಕಾಡಿ ಗ್ರಾಮದ ಪೇತ್ರಿ ನಿವಾಸಿ ಪ್ರಕಾಶ್ ನಾಯ್ಕ್ (38)ಕೊಲೆಯಾದ ವ್ಯಕ್ತಿ. ಆತನ ಸ್ನೇಹಿತನಾಗಿದ್ದ ಚೇರ್ಕಾಡಿ ಗ್ರಾಮದ ಪ್ರಶಾಂತ್(31) ಕೊಲೆ ಗೈದ ಅಪರಾಧಿ.
2017ರ ಮಾರ್ಚ್ 1ರಂದು ಚೇರ್ಕಾಡಿ ಗ್ರಾಮದ ಪೇತ್ರಿಯ ಯುವಕ ಮಂಡಲದ ಬಳಿ ಹಣ ನೀಡಲಿಲ್ಲ ಎಂಬ ವಿಚಾರಕ್ಕೆ ಪ್ರಶಾಂತ್ ನು ತನ್ನ ಸ್ನೇಹಿತನಾಗಿದ್ದ ಪ್ರಕಾಶ್ ನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಡಿವೈಎಸ್ಪಿ ಎಸ್ ಎ ಕುಮಾರಸ್ವಾಮಿ ಅವರು ನ್ಯಾಯಾಲಯಕ್ಕೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ 34 ಸಾಕ್ಷಿಗಳ ಪೈಕಿ 12 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. ಈ ಪೈಕಿ ಪ್ರತ್ಯಕ್ಷದರ್ಶಿಗಳ ಸಾಕ್ಷಿ ಅಭಿಯೋಜನೆಗೆ ಪೂರಕವಾಗಿತ್ತು. ವಿಚಾರಣೆ ಬಳಿಕ ಆರೋಪಿ ಮೇಲಿನ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯಪಟ್ಟ ನ್ಯಾಯಾಧೀಶ ಶಾಂತವೀರಪ್ಪ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಿಚಾರಣೆ ವೇಳೆ ಪ್ರಾಸಿಕ್ಯೂಶನ್ ಪರವಾಗಿ ಹಿರಿಯ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದ ಮಂಡಿಸಿದ್ದರು.