ರಾಜಾಂಗಣದಲ್ಲಿ ಡಿ.21-22 ರಂದು “ಉಡುಪಿ ನೃತ್ಯೋತ್ಸವ 2022”
ಉಡುಪಿ ಡಿ.20 (ಉಡುಪಿ ಟೈಮ್ಸ್ ವರದಿ) : ಸೃಷ್ಟಿ ನೃತ್ಯ ಕಲಾ ಕುಟೀರ ಇದರ ವತಿಯಿಂದ ಉಡುಪಿ ನೃತ್ಯೋತ್ಸವ 2022 ಕಾರ್ಯಕ್ರಮವು ಡಿ.21 ಮತ್ತು 22 ರಂದು ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಮಂಜರಿ ಚಂದ್ರ ಅವರು ಹೇಳಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಡಿ.21ರಂದು ಬೆಳಿಗ್ಗೆ 8:30ಕ್ಕೆ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಷ್ಟ್ರಮಟ್ಟದ ಈ ನೃತ್ಯ ಸ್ಪರ್ಧೆಯು ಸಬ್ ಜೂನಿಯರ್ ಮತ್ತು ಸೂಪರ್ ಸೀನಿಯರ್ ವಿಭಾಗದಲ್ಲಿ ನಡೆಯಲಿದೆ. ಈ ವೇಳೆ ಸೃಷ್ಟಿ ನೃತ್ಯ ಕಲಾ ಕುಟೀರದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ನಡೆಸಲಾಗುತ್ತದೆ. ಮಧ್ಯಾಹ್ನ 2:30 ರಿಂದ ಸಂಜೆ 5:00 ಗಂಟೆ ತನಕ ಬೇರೆ ಬೇರೆ ರಾಜ್ಯದ ನೃತ್ಯ ಕಲಾವಿದರಿಂದ “ನೃತ್ಯಗುಚ್ಚ” ಎಂಬ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7:00 ಗಂಟೆಯಿಂದ ಸೃಷ್ಟಿ ನೃತ್ಯ ಕಲಾ ಕುಟೀರದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಹಾಗೂ ಡಿ.22ರಂದು ರಾಷ್ಟ್ರಮಟ್ಟದ ಜೂನಿಯರ್ ಮತ್ತು ಸೀನಿಯರ್ ವಿಭಾಗದ ನೃತ್ಯ ಸ್ಪರ್ಧೆ ನಡೆಯಲಿದ್ದು ಮಧ್ಯಾಹ್ನ ವಿವಿಧ ರಾಜ್ಯಗಳ ನೃತ್ಯ ಕಲಾವಿದರಿಂದ “ನೃತ್ಯಗೊಚ್ಚ” ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ರಾತ್ರಿ 7 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಮಾರಂಭದಲ್ಲಿ ಹಿರಿಯ ನೃತ್ಯ ಗುರುಗಳಾದ ಕೆ. ಚಂದ್ರಶೇಖರ ನಾವಡ ಇವರಿಗೆ ಭರತನಾಟ್ಯ ವಿದ್ವನ್ಮಣಿ ಪ್ರಶಸ್ತಿ ಪ್ರಧಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ “ಶ್ರೀ ಕೃಷ್ಣ ಸಂದರ್ಶನಂ” ಎಂಬ ನೃತ್ಯರೂಪಕ ನಡೆಯಲಿದೆ. ಹಾಗೂ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕೂಡಾ ಇದೇ ವೇಲೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಅನನ್ಯ ಹೆಬ್ಬಾರ್, ಶ್ರೀರಾಮ್ ಕೌಡೂರು, ಸ್ಮೃತಿ ಇರಾ, ಅಕ್ಷತಾ ಆಚಾರ್ಯ ಉಪಸ್ಥಿತರಿದ್ದರು.