ಬ್ರಹ್ಮಾವರ/ಕೋಟ: ಕಳ್ಳತನ ಪ್ರಕರಣದ ಆರೋಪಿ ಬಂಧನ

ಉಡುಪಿ ಡಿ.20 (ಉಡುಪಿ ಟೈಮ್ಸ್ ವರದಿ): ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಾಡೂರು ಗ್ರಾಮದ ತಂತ್ರಾಡಿಯ ಬಾಯರ್ಬೆಟ್ಟು ನಿವಾಸಿ ವಿಜಯ ಕುಮಾರ್ ಶೆಟ್ಟಿ (28) ಬಂಧಿತ ಆರೋಪಿ

ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸುತ್ತಿದ್ದ ಸ್ಕೂಟರ್, ಕಳವು ಮಾಡಿದ 4,64,700 ರೂ. ಮೌಲ್ಯದ ಚಿನ್ನಾಭರಣಗಳು, 2080 ರೂ. ಮೌಲ್ಯದ ಬೆಳ್ಳಿ ನಾಣ್ಯಗಳು, ಕಳವು ಮಾಡಿದ ಕಾಳುಮಣಸಿನ ಮಾರಾಟದಿಂದ ಪಡೆದ 84,000 ರೂ. ನಗದು ಹಾಗೂ ಅಪಾರ ಮೌಲ್ಯದ ಸೀರೆ ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಮಾರ್ಚ್ ನಿಂದ ನವೆಂಬರ್ ವರೆಗೆ ಕೋಟ ಹಾಗೂ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ 5 ಕಡೆ ಮನೆ ಹಾಗೂ ಶಾಲೆ ಗಳಲ್ಲಿ ಕಳ್ಳತನ ನಡೆಸಿದ್ದಾನೆ. ಈ ಪ್ರಕರಣಗಳನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವ ಸಲುವಾಗಿ ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡದ ಪೊಲೀಸರು ಹಳೆಯ ರಾತ್ರಿ ಮನೆ ಕಳ್ಳತನ ಪ್ರಕರಣದ ಆರೋಪಿಗಳು, ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನದ ಮೇಲೆ ನಿಗಾವಹಿಸಿದ್ದರು. ಈ ನಡುವೆ ಡಿ.19 ರಂದು ಆರೋಪಿ ವಿಜಯ ಕುಮಾರ್ ಶೆಟ್ಟಿಯನ್ನು ಕಂಡ ಪೊಲೀಸರು ಆತನ ಸ್ಕೂಟರ್ ನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಳ್ಳತನ ನಡೆಸಲು ಬೇಕಾದ ಸಲಕರಣೆಗಳು ಆತನ ವಶದಲ್ಲಿದ್ದುದು ಕಂಡು ಬಂದಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತನು ಕಾಡೂರು ಗ್ರಾಮದ ತಂತ್ರಾಡಿಯ ಮನೆಯಲ್ಲಿ, ನಡೂರು ಗ್ರಾಮದ ಶ್ರೀ ಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಡ್ತಾಡಿ ಗ್ರಾಮದ ದಾಲಾಡಿಯಲ್ಲಿರು ಮನೆ, ಬಿಲ್ಲಾಡಿ ಮಾನ್ಯ ಶಾಲೆಯ ಸಮೀಪದ ಮನೆ ಮತ್ತು ಆರೂರು ಗ್ರಾಮದ ಮನೆಯಲ್ಲಿ ಕಳ್ಳತನ ನಡೆಸಿರುವುದು ತಿಳಿದು ಬಂದಿದೆ.

ಸದ್ಯ ಆರೋಪಿಯ ಬಂಧನದಿಂದ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ 4 ಕಳ್ಳತನ ಪ್ರಕರಣಗಳು ಹಾಗೂ ಕೋಟಾ ಪೊಲೀಸ್ ಠಾಣಾ ವಾಪ್ತಿಯ 1 ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿ ವಿಜಯ ಕುಮಾರ್ ಶೆಟ್ಟಿ ಈತನ ಮೇಲೆ ಈ ಹಿಂದೆ ದ.ಕ ಜಿಲ್ಲೆ ಪುತ್ತೂರು ನಗರ ಪೊಲೀಸ್ ಠಾಣೆ, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ತಲಾ 2 ಪ್ರಕರಣಗಳು , ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ 4 ಪ್ರಕರಣ, ಹಾಗೂ ಚಿಕ್ಕಮಂಗಳೂರು ಜಿಲ್ಲೆ ಎನ್.ಆರ್ ಪುರ ಠಾಣೆ, ಹರಿಹರ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣೆ, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣಗಳು ದಾಖಲಾಗಿರುತ್ತದೆ. ಈ ಪೈಕಿ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಜಾಮೀನು ರಹಿತ ವಾರಂಟ್ ಜಾರಿಯಾಗಿರುತ್ತದೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ.ಹೆಚ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ .ಟಿ ಸಿದ್ದಲಿಂಗಪ್ಪ ರವರ ಮಾರ್ಗದರ್ಶನದಂತೆ, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್ ನಾಯ್ಕ ರವರ ನಿರ್ದೇಶನದಂತೆ ಬ್ರಹ್ಮಾವರ ವೃತ್ತ ಠಾಣೆಯ ಸಿ.ಪಿ.ಐ ಅನಂತ ಪದ್ಮನಾಭ, ಬ್ರಹ್ಮಾವರ ಠಾಣಾ ಪಿ.ಎಸ್. ಐ ರಾಜಶೇಖರವಂದಲಿ, ಠಾಣಾ ತನಿಖೆ ಪಿ.ಎಸ್. ಐಶ್ರೀಮತಿ ಮುಕ್ತಾಬಾಯಿ, ಕೋಟಾ ಠಾಣಾ ಪಿಎಸ್.ಐ ಮಧು ಬಿಇ, ಬ್ರಹ್ಮಾವರ ಠಾಣಾ ಸಿಬ್ಬಂದಿಗಳಾದ ವೆಂಕಟ ರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್, ಮಹಮದ್ ಅಜ್ಮಲ್, ರಾಘವೇಂದ್ರ ಕಾರ್ಕಡ, ಸುರೇಶ್ ಶೆಟ್ಟಿ, ಗಣೇಶ್ ದೇವಾಡಿಗ, ದಿಲೀಪ, ಸಂತೋಷ ರಾಥೋಡ್, ಸಂದೀಪ, ದೇವರಾಜ್, ಗುರುಕಿರಣ, ಸುರೇಶ್ ಬಾಬು, ಅಂಬ್ರಯ್ಯ ಹೀರೆಮಠ, ನವೀನ ಯಾದವ್, ಕೋಟಾ ಠಾಣಾ ಸಿಬ್ಬಂದಿ ರಾಘವೇಂದ್ರ ಶೆಟ್ಟಿ, ಹಾಗೂ ಕಂಪ್ಯೂಟರ್ ಸಿಬ್ಬಂದಿ ಯೋಗೀಶ್ ಮತ್ತು ಜಿಲ್ಲಾ ಸಿಡಿಆರ್ ವಿಭಾಗದ ನಿತಿನ್, ದಿನೇಶ್, ಹಾಗೂ ಚಾಲಕ ಅಣ್ಣಪ್ಪ ಮತ್ತು ಸಂತೋಷ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್ ಐ.ಪಿ.ಎಸ್ ರವರು ತಂಡವನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!