ಡಿ.24-25: ಅಟಲ್ ಉತ್ಸವದ ಪ್ರಯುಕ್ತ ಬೂತ್ ಸಂಗಮ- ಅಟಲ್ ಟ್ರೋಫಿ ಪ್ರೊ ಕಬಡ್ಡಿ ಪಂದ್ಯಾಕೂಟ

ಉಡುಪಿ ಡಿ.20(ಉಡುಪಿ ಟೈಮ್ಸ್ ವರದಿ): ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಹಾಗೂ ಗ್ರಾಮಾಂತರ ವತಿಯಿಂದ ಅಟಲ್ ಉತ್ಸವದ ಪ್ರಯುಕ್ತ ಬೂತ್ ಸಂಗಮ ಹಾಗೂ ಡಿ.24ರ ಸಂಜೆ 5 ಗಂಟೆಯಿಂದ ಡಿ.25 ರ ಬೆಳಿಗ್ಗೆ ವರೆಗೆ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಅಟಲ್ ಟ್ರೋಫಿ ಪ್ರೊ ಕಬಡ್ಡಿ ಪಂದ್ಯಾಕೂಟವನ್ನು ಉಡುಪಿ ಎಂಜಿಎಂ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ರಘುಪತಿ ಭಟ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಪಂದ್ಯಕೂಟವನ್ನು ಕೇಂದ್ರ ಯುವಜನ, ಕ್ರೀಡೆ ಹಾಗೂ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಉದ್ಘಾಟಿಸಲಿದ್ದಾರೆ. ಹಾಗೂ ಕರ್ನಾಟಕ ಸರಕಾರದ ಕ್ರೀಡೆ ಮತ್ತು ಯುವ ಜನ ಸಬಲೀಕರಣ ಸಚಿವ ಡಾ.ಕೆ ಸಿ ನಾರಾಯಣ ಗೌಡ ರವರು ಪಂದ್ಯಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಈ ಪಂದ್ಯಾಕೂಟದಲ್ಲಿ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಾದ ದೆಹಲಿ, ಹರಿಯಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನಗಳ ವಿಜೇತರಿಗೆ ಅನುಕ್ರಮವಾಗಿ 1 ಲಕ್ಷ, 75 ಸಾವಿರ, 50 ಸಾವಿರ, ಹಾಗೂ 25 ಸಾವಿರ ರೂ. ನಗದು ಬಹುಮಾನ, ಪ್ರಶಸ್ತಿ ಫಲಕಗಳನ್ನು ವಿತರಿಸಲಾಗುವುದು. ಈ ಪಂದ್ಯಾಟವನ್ನು ವೀಕ್ಷಿಸಲು ಸುಮಾರು 10 ರಿಂದ 15 ಸಾವಿರ ವೀಕ್ಷಕರು ಆಗಮಿಸುವ ನಿರೀಕ್ಷೆ ಇದ್ದು ಅದಕ್ಕೆ ಪೂರಕವಾದ ಗ್ಯಾಲರಿ ಮತ್ತು ಅಸನಗಳ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಈ ವೇಳೆ ಬೂತ್ ಸಂಗಮ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98 ನೇ ಜನ್ಮ ದಿನಾಚರಣೆಯನ್ನು ಪಕ್ಷವು ರಾಷ್ಟ್ರಾದ್ಯಂತ ಸುಶಾಸನ ದಿವಸ್ ಆಗಿ ಆಚರಿಸುತಿದ್ದು ಈ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ 226 ಮತಗಟ್ಟೆಗಳ ಅಧ್ಯಕ್ಷರ ಸಮಾವೇಶ ಬೂತ್ ಸಂಗಮ ಕಾರ್ಯಕ್ರಮವನ್ನು ಡಿ.25 ರಂದು ಸಂಜೆ 4 ಗಂಟೆಗೆ ಉಡುಪಿ ಎಂಜಿಎಂ ಮೈದಾನದಲ್ಲಿ ಉಡುಪಿ ನಗರ ಹಾಗೂ ಗ್ರಾಮಾಂತರ ಬಿಜೆಪಿಯ ಆಶ್ರಯದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷ ಸಂಘಟನೆಯಲ್ಲಿ ಮತಗಟ್ಟೆ ಅಧ್ಯಕ್ಷರ ಮಹತ್ವವನ್ನು ಗುರುತಿಸಲು ಎಲ್ಲಾ 226 ಮತಗಟ್ಟೆ ಅಧ್ಯಕ್ಷರಿಗೆ ಸಮವಸ್ತ್ರಗಳನ್ನು ನೀಡಿ ಅವರನ್ನು ಅತಿ ಗಣ್ಯ ವ್ಯಕ್ತಿಗಳ ಸಾಲಿನಲ್ಲಿ ಪ್ರತ್ಯೇಕವಾಗಿ ಕುಳ್ಳಿರಿಸಲಾಗುತ್ತದೆ. ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ದಿಕ್ಸೂಚಿ ಭಾಷಣ ಮಾಡಲಿದ್ದು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ ಜೀ ಅವರು ಸಂಘಟನಾತ್ಮಕ ಮಾರ್ಗದರ್ಶನಗಳನ್ನು ನೀಡಲಿದ್ದಾರೆ. ಹಾಗೂ ಬೂತ್ ಸಂಗಮ ಕಾರ್ಯಕ್ರಮದ ಬಳಿಕ ಕರ್ನಾಟಕದ ಹೆಸರಾಂತ ಚಲನಚಿತ್ರ ಗಾಯಕ ವಿಜಯಪ್ರಕಾಶ್ ನೇತೃತ್ವದ ತಂಡದಿಂದ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾಯಕಿಯರಾದ ಅನುರಾಧ ಮತ್ತು ಐಶ್ವರ್ಯ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಹೇಶ್ ಠಾಕೂರ್, ಮಟ್ಟಾರು ರತ್ನಾಕರ ಹೆಗ್ಡೆ, ಯಶ್ ಪಾಲ್ ಸುವರ್ಣ, ರಾಘವೇಂದ್ರ ಕಿಣಿ, ದಿನಕರ ಬಾಬು ಮತ್ತಿರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!