ಡಿ.22-26: ಉಡುಪಿಯ ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುವರ್ಣ ಸಂಭ್ರಮ
ಉಡುಪಿ ಡಿ.20 (ಉಡುಪಿ ಟೈಮ್ಸ್ ವರದಿ): ಉಡುಪಿಯ ಮುಕುಂದ ಕೃಪಾ ಆಂಗ್ಲ ಮಾಧ್ಯಮ ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಸಂಭ್ರಮಾಚರಣೆ, ವಾರ್ಷಿಕ ಬಹುಮಾನ ವಿತರಣೆ , ವಾರ್ಷಿಕೋತ್ಸವ, ಪೇರೆಂಟ್ – ಟೀಚರ್ಸ್ ಡೇ ಮತ್ತು ಹಳೇ ವಿದ್ಯಾರ್ಥಿ ದಿನಾಚರಣೆ ಡಿ.22 ರಿಂದ ಡಿ.26 ರ ವರೆಗೆ ನಡೆಯಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಶಾಂತಾರಾಮ್ ಶೆಟ್ಟಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಈ ಡಿ.22 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಶಾಲೆಯ ಸಭಾಂಗಣದಲ್ಲಿ 50 ನೇ ವರ್ಷದ ವಾರ್ಷಿಕ ಬಹುಮಾನ ವಿತರಣಾ ದಿನ, ಡಿ.24 ರಂದು ಬೆಳಿಗ್ಗೆ 9.30 ರಿಂದ 10.30 ರ ವರೆಗೆ ಬೆಳಗ್ಗಿನ ಅವಧಿಯ ಕಾರ್ಯಕ್ರಮ ಹಾಗೂ ಮಧ್ಯಾಹ್ನ 3.30 ರಿಂದ ರಾತ್ರಿ 9 ಗಂಟೆ ವರೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ವಾರ್ಷಿಕೋತ್ಸವ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಡಿ.25 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಹಳೇ ವಿದ್ಯಾರ್ಥಿಗಳ ದಿನ , ಮಧ್ಯಾಹ್ನ 2.30 ರಿಂದ ರಾತ್ರಿ 8.30 ರ ವರೆಗೆ ಅದೇ ವೇದಿಕೆಯಲ್ಲಿ ಪೋಷಕರು ಮತ್ತು ಶಿಕ್ಷಕರ ದಿನ ಕಾರ್ಯಕ್ರಮ ನಡೆಯಲಿದೆ ಎಂದರು.
ಹಾಗೂ ಶಾಲೆಯ 50 ನೇ ವರ್ಷದ ಸುವರ್ಣ ಸಂಭ್ರಮದ ದಿನವು ಡಿ.26 ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ ಶಾಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ನಿವೃತ್ತ ಮುಖ್ಯೋಪಾದ್ಯಾಯಿನಿ ಕಮಲಿನಿ ಆರ್ ಭಟ್ ಅವರು ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 2.30 ರಿಂದ ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾ ರಾವ್, ಉಡುಪಿ ಡಿಡಿಪಿಐ ಎನ್. ಶಿವರಾಜ್, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಉಡುಪಿ ಬಿಇಒ ಚಂದ್ರೇ ಗೌಡ ಡಿಎಚ್, ಮಣಿಪಾಲದ ಡಾ. ಟಿಎಂಎ ಪೈ ಫೌಂಡೇಶನ್ ನ ಕಾರ್ಯದರ್ಶಿ ಟಿ. ಅಶೋಕ್ ಪೈ, ಡಯಟ್ ಉಡುಪಿ ಇದರ ಉಪ ಪ್ರಾಂಶುಪಾಲ ಅಶೋಕ್ ಕಾಮತ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಗಣನಾಥ ಎಕ್ಕಾರು, ಎಜಿಇ ಮಣಿಪಾಲ ಇದರ ಎಜುಕೇಶನ್ ಆಫೀಸರ್ ನಾಗೇಶ್ ಶಾನ್ ಭಾಗ್, ಮುಕುಂದ ಕೃಪಾ ಶಾಲೆಯ ನಿವೃತ್ತ ಪ್ರಾಂಶುಪಾಲೆ ಪ್ರಭಾವತಿ ಎಸ್ ಅಡಿಗ, ನಟ ರಕ್ಷಿತ್ ಶೆಟ್ಟಿ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀವಿದ್ಯಾ ಸಾಗರ ತೀರ್ಥ ಸ್ವಾಮೀಜಿ ಹಾಗೂ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್‍ನ ಅಧ್ಯಕ್ಷ ಎಚ್.ಎಸ್ ಬಲ್ಲಾಳ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಹಾಗೂ ಪಿಟಿಎ ಅಧ್ಯಕ್ಷರನ್ನು ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಭುವನ್ ಮಣಿಪಾಲ ಅವರ ನಿರ್ದೇಶನದ ಏಕಲವ್ಯ ನಾಟಕ ಮತ್ತು ನರಸಿಂಹ ತುಂಗ ಅವರ ನಿರ್ದೇಶನದ ಮಾಯಾಪುರಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಕೂಡಾ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಕಾರ್ಯದರ್ಶಿ ವರದರಾಜ ಪೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಕರುಣಾಕರ ಭಂಗೇರ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಾದಿರಾಜ ಸುವರ್ಣ, ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ನ ಮುಖ್ಯೋಪಾಧ್ಯಾಯ ಸುದರ್ಶನ್ ನಾಯಕ್, ಹಿರಿಯ ಶಿಕ್ಷಕಿ ಭಾರತಿ ಉಮೇಶ್ ಉಪಸ್ಥಿತರಿದ್ದರು.