ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿಗೆ ಜಾನಪದ ಪ್ರಶಸ್ತಿ ಪ್ರದಾನ
ಉಡುಪಿ ಡಿ.20 (ಉಡುಪಿ ಟೈಮ್ಸ್ ವರದಿ) : ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಉಡುಪಿ ಜಿಲ್ಲೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಹಾಗೂ ಯಕ್ಷಗಾನ ಕೇಂದ್ರ ಹಂಗಾರಕಟ್ಟೆ -ಐರೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗಮಂಟಪದಲ್ಲಿ ನಡೆದ ಜಾನಪದ ಉತ್ಸವ -2022 ' ಕಾರ್ಯಕ್ರಮದಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕು ಕಂಬಳ ಸಮಿತಿಯ ಅಧ್ಯಕ್ಷ ಸಸಿಹಿತ್ಲು ವೆಂಕಟ ಪೂಜಾರಿ ಅವರಿಗೆ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಪ್ರಾಯೋಜಿತ ಪ್ರತಿಷ್ಠಿತ
ಜಾನಪದ ಪ್ರಶಸ್ತಿ-2022 ‘ ಪ್ರದಾನ ಮಾಡಿ ಗೌರವಿಸಲಾಯಿತು.
ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಅವರು ಮಾತನಾಡಿ, ಜಾನಪದ ಕಲೆಗಳು ತುಳುನಾಡಿನ ಜನರ ಜೀವಾಳವಾಗಿದೆ. ಈ ಮಣ್ಣಿನ ಮೌಖಿಕ ಸಾಹಿತ್ಯ, ಭೌತಿಕ ವಸ್ತು, ಧಾರ್ಮಿಕ -ಸಾಂಸ್ಕೃತಿಕ ಆಚರಣೆಗಳು ಹಾಗೂ ರಂಗಕಲೆಗಳು ಈ ನಾಲ್ಕು ವಿಷಯಗಳನ್ನು ಅಧ್ಯಯನ ಮಾಡಿದರೆ ಒಂದು ಪ್ರದೇಶದ ಸಮಗ್ರ ಇತಿಹಾಸವನ್ನು ಕಟ್ಟಿಕೊಡಬಹುದು. ಈ ನಿಟ್ಟಿನಲ್ಲಿ ಸಂಧಿ ಪಾಡ್ದನಗಳು, ಗಾದೆ ಮಾತುಗಳು, ಹಿರಿಯರು ಬಳಸಿದ ಕೃಷಿ ಪರಿಕರಗಳನ್ನು ಅಧ್ಯಯನ ಮಾಡಿದರೆ ತುಳು ನಾಡಿನ ಸಂಸ್ಕೃತಿಯ ಇತಿಹಾಸವನ್ನು ಅರಿಯಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ನಾಡಿನ ಸಾಂಸ್ಕೃತಿಕ ಇತಿಹಾಸವನ್ನು ಸಾರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಾಡಿನ ಜಾನಪದ ಸಾಧಕರನ್ನು ಗುರುತಿಸಿ ಅವರನ್ನು ಗೌರವಿಸುವ ಕಾರ್ಯವನ್ನು ಟ್ರಸ್ಟ್ ಕಳೆದ 6 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ನಮ್ಮ ಜಾನಪದ ಕಲೆಗಳು ಕೇವಲ ಆರಾಧನಾ ಕಲೆಗಳಾಗಿ ನಶಿಸಿ ಹೋಗಬಾರದು. ಅವುಗಳನ್ನು ಮುನ್ನೆಲೆಗೆ ತಂದು ಜನಾಕರ್ಷಣೆಯ ಕಲಾಪ್ರಾಕಾರಗಳನ್ನಾಗಿಸಬೇಕು ಎನ್ನುವ ಉದ್ದೇಶದಿಂದ ಜಿಲ್ಲೆಯ ವಿವಿಧೆಡೆ ಜಾನಪದ ಉತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಸದುದ್ದೇಶಕ್ಕೆ ನಾಡಿನ ವಿವಿಧ ಸಂಘ ಸಂಸ್ಥೆಗಳು ಕೈ ಜೋಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ವೆಂಕಟ ಪೂಜಾರಿ ಅವರು, ನಾಡಿನ ಜಾನಪದ ಸಂಸ್ಕೃತಿಯ ಹಿನ್ನಲೆ ಹೊಂದಿರುವ ಸಾಂಪ್ರಾದಾಯಿಕ ಕಂಬಳ ಆಚರಣೆಯನ್ನು ಉಳಿಸಿ ಬೆಳೆಸಲು ಸರಕಾರ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಡಾ.ತುಕಾರಾಮ ಪೂಜಾರಿ ಅವರಿಗೆ ಗೌರವಾರ್ಪಣೆ ನಡೆಯಿತು. ಹಾಗೂ ಸಭಾ ಕಾರ್ಯಕ್ರಮದ ಬಳಿಕ `ಕಲಾಮಯಂ ಉಡುಪಿ’ ತಂಡದಿಂದ ವೈವಿಧ್ಯಮಯ ಜಾನಪದ ಕಲಾಪ್ರಕಾರಗಳ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ, ಪರಿಷತ್ತಿನ ಬ್ರಹ್ಮಾವರ ಘಟಕದ ಅಧ್ಯಕ್ಷ ಎಚ್.ಸುದರ್ಶನ ಹೆಗ್ಡೆ, ಜಿಲ್ಲಾ ಖಜಾಂಚಿ ಕೆ.ಜಯರಾಮ ಆಚಾರ್ಯ, ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿಗಳಾದ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಹಾಗೂ ತಲ್ಲೂರು ಶಿವಪ್ರಸಾದ್ ಶೆಟ್ಟಿ, ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ರವಿರಾಜ ನಾಯಕ್, ಯಕ್ಷಗಾನ ಕೇಂದ್ರದ ಅಧ್ಯಕ್ಷ ರಾಜಶೇಖರ ಹೆಬ್ಬಾರ್,
ಜಾನಪದ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.