ಅಣ್ಣಾಮಲೈ ಕೈಯಲ್ಲಿ ದುಬಾರಿ ಕೈಗಡಿಯಾರ: ರಾಷ್ಟ್ರೀಯತೆಯನ್ನು ಪ್ರಶ್ನಿಸಿದ ಡಿಎಂಕೆ ಸಚಿವ-ಜೀವವಿರುವರೆಗೂ ಈ ವಾಚ್ ಧರಿಸುತ್ತೇನೆ ಎಂದ ಅಣ್ಣಾಮಲೈ
ಚೆನ್ನೈ ಡಿ.20 :ರಾಜಕೀಯ ನಾಯಕರು ಬಳಸುವ ದುಬಾರಿ ವಸ್ತುಗಳು ವಿವಾದ ಸೃಷ್ಟಿಸುವುದು ಹಳೇ ಸಂಪ್ರದಾಯ. ಇದೀಗ ಈ ಸಾಲಿಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಅವರ ಕೈಯಲ್ಲಿರುವ ವಿಶೇಷ ಆವೃತ್ತಿಯ ದುಬಾರಿ ರಫೇಲ್ ಕೈಗಡಿಯಾರ ಹೊಸ ವಿವಾದವನ್ನು ಸೃಷ್ಟಿಸಿದೆ.
ಈ ಬಗ್ಗೆ ಡಿಎಂಕೆ ನಾಯಕ ಹಾಗೂ ಸಚಿವ ಸೆಂಥಿಲ್ ಬಾಲಾಜಿ ಅವರು ಸರಣಿ ಟ್ವೀಟ್ ಮಾಡಿ ಟೀಕಿಸಿದ್ದು, ‘ತನ್ನಲ್ಲಿರುವ ಆಸ್ತಿ ನಾಲ್ಕು ಆಡುಗಳು ಮಾತ್ರ ಎಂದು ಹೇಳಿಕೊಳ್ಳುತ್ತಿರುವ ಅಣ್ಣಾಮಲೈ ಫ್ರೆಂಚ್ ಕಂಪನಿಯು ತಯಾರಿಸಿರುವ ದುಬಾರಿ ವಾಚ್ ಅನ್ನು ಖರೀದಿಸಿದ್ದು ಹೇಗೆ’ ಎಂದು ಪ್ರಶ್ನಿಸಿದ್ದಾರೆ. ಕಂಪನಿಯು ಈ ಆವೃತ್ತಿಯಲ್ಲಿ ಕೇವಲ 500 ವಾಚ್ಗಳನ್ನು ತಯಾರಿಸಿದ್ದು, ಪ್ರತಿ ವಾಚ್ ಗೂ ಐದು ಲ.ರೂ.ಗಿಂತ ಅಧಿಕ ಬೆಲೆಯಿದೆ ಎಂದಿದ್ದಾರೆ ಹಾಗೂ ಈ ವಾಚ್ ಖರೀದಿಯ ಪಾವತಿಯನ್ನು ತೋರಿಸುವಂತೆ ಸವಾಲು ಹಾಕಿದ್ದಾರೆ. ಇದರ ಜೊತೆಗೆ ಬಿಜೆಪಿ ಅಧ್ಯಕ್ಷರ ರಾಷ್ಟ್ರವಾದವನ್ನೂ ಅವರು ಪ್ರಶ್ನಿಸಿದ್ದಾರೆ.
ಸೆಂಥಿಲ್ ಆರೋಪಕ್ಕೆ ಸುದ್ದಿಗೋಷ್ಠಿ ನಡೆಸಿ ಅಣ್ಣಾಮಲೈ ಅವರು ಪ್ರತಿಕ್ರಿಯೆ ನೀಡಿದ್ದು, ‘ನಾನು ಧರಿಸಿರುವ ವಾಚ್ ಅನ್ನು ಭಾರತವು ರಫೇಲ್ ಯುದ್ಧವಿಮಾನಗಳಿಗೆ ಬೇಡಿಕೆ ಸಲ್ಲಿಸಿದಾಗ ತಯಾರಿಸಲಾಗಿತ್ತು. ಅದನ್ನು ವಿಮಾನದ ಬಿಡಿಭಾಗಗಳಿಂದ ನಿರ್ಮಿಸಲಾಗಿದೆ. ಇಂತಹ ಕೇವಲ 500 ವಾಚ್ ಗಳಿದ್ದು, ಅದು ರಫೇಲ್ ವಿಶೇಷ ಆವೃತ್ತಿ ಎಂದು ಕರೆಯಲಾಗುವ ಸಂಗ್ರಾಹಕರ ಆವೃತ್ತಿಯಾಗಿದೆ. ನನಗೆ ರಫೇಲ್ ವಿಮಾನವನ್ನು ಹಾರಿಸುವ ಅವಕಾಶ ಸಿಗಲಿಲ್ಲ, ಹೀಗಾಗಿ ಓರ್ವ ರಾಷ್ಟ್ರವಾದಿಯಾಗಿ ನಾನು ರಫೇಲ್ ವಾಚ್ ಧರಿಸಿದ್ದೇನೆ. ನನ್ನ ಜೀವವಿರುವರೆಗೂ ಈ ವಾಚ್ ಅನ್ನು ನಾನು ಧರಿಸುತ್ತೇನೆ. ವಿಶ್ವದಲ್ಲಿ ಬೇರೆ ಯಾರು ಈ ವಾಚ್ ಖರೀದಿಸುತ್ತಾರೆ..? ಓರ್ವ ಭಾರತೀಯ ಮಾತ್ರ ಅದನ್ನು ಖರೀದಿಸಬಲ್ಲ. ನಾನು ರಾಷ್ಟ್ರವಾದಿಯಾಗಿರುವುದರಿಂದ ನನ್ನ ದೇಶಕ್ಕಾಗಿ ಡಸಾಲ್ಟ್ ರಫೇಲ್ ವಿಮಾನದ ಬಿಡಿಭಾಗಗಳಿಂದ ತಯಾರಿಸಿರುವ ಈ ವಾಚ್ ಅನ್ನು ಧರಿಸಿದ್ದೇನೆ. ನಾನು ವಿಭಜನೆಯ ಬಗ್ಗೆ ಮಾತನಾಡುವ ವ್ಯಕ್ತಿಯಲ್ಲ’ ಎಂದು ಸ್ಪಷ್ಟಣೆ ನೀಡಿದ್ದಾರೆ.
ಇನ್ನು ತನ್ನ ಟ್ವೀಟ್ ಮೂಲಕ ಅಣ್ಣಾಮಲೈ ಸುದ್ದಿಗೋಷ್ಠಿಗೆ ಪ್ರತಿಕ್ರಿಯಿಸಿರುವ ಬಾಲಾಜಿ, ಅಣ್ಣಾಮಲೈ ಅವರೇ ರಫೇಲ್ ವಿವಾದವನ್ನು ಜನರಿಗೆ ನೆನಪಿಸಿದ್ದಾರೆ. ಹಲವಾರು ಲ.ರೂ.ಗಳ ಮೌಲ್ಯದ ವಿದೇಶಿ ನಿರ್ಮಿತ ವಾಚ್ ಅನ್ನು ಧರಿಸುವುದು ರಾಷ್ಟ್ರವಾದವೇ ? ಅದು ಮೇಕ್ ಇನ್ ಇಂಡಿಯಾ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಣ್ಣಾಮಲೈ ವಾಚ್ ನ ಬಿಲ್ ತೋರಿಸುತ್ತಾರೆಯೇ ಇಲ್ಲವೇ ಎಂದೂ ಅವರು ಕೇಳಿದ್ದಾರೆ.