ಬೈಂದೂರು: ಕೆಲಸಗಾರನಿಂದ ಅಂಗಡಿಯಲ್ಲಿದ್ದ 3 ಲಕ್ಷದ ಬಟ್ಟೆ ಕಳವು- ಮಾಲೀಕನಿಗೆ ಬೆದರಿಕೆ
ಬೈಂದೂರು ಡಿ.19( ಉಡುಪಿ ಟೈಮ್ಸ್ ವರದಿ): ಬಟ್ಟೆ ಅಂಗಡಿಯ ಕೆಲಸಗಾರನೋರ್ವ ಮಾಲೀಕರು ಇಲ್ಲದ ವೇಳೆ 3 ಲಕ್ಷ ಮೌಲ್ಯದ ಬಟ್ಟೆಗಳನ್ನು ಕದ್ದಿದ್ದೂ ಮಾತ್ರವಲ್ಲದೆ ಈ ಬಗ್ಗೆ ವಿಚಾರಿಸಿದಾಗ 2 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟು ಬೆದರಿಕೆ ಹಾಕಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಗಣೇಶ್ ಪ್ರಸಾದ್ ಶೆಟ್ಟಿ ಎಂಬವರು ತಮ್ಮ ಅಂಗಡಿ ಕೆಲಸಗಾರ ಎನ್ ರವಿಚಂದ್ರ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಗಣೇಶ್ ಪ್ರಸಾದ್ ಶೆಟ್ಟಿ ಅವರು ಉಪ್ಪುಂದ ಪೇಟೆಯ ಅಂಡರ್ ಪಾಸ್ ಬಳಿ ಇರುವ ನವೀನ್ ಚಂದ್ರರವರ ದುರ್ಗಾದೇವಿ ಕಾಂಪ್ಲೆಕ್ಸ್ ನಲ್ಲಿ ಬಟ್ಟೆ ಅಂಗಡಿಯನ್ನು 2020ರ ನ.1 ರಿಂದ ಬಾಡಿಗೆ ಪಡೆದು ವ್ಯಾಪಾರ ಮಾಡುತ್ತಿದ್ದರು. ಈ ಬಟ್ಟೆ ಅಂಗಡಿಯಲ್ಲಿ ಒಂದುವರೆ ವರ್ಷಗಳಿಂದ ನಂದನವನ ನಿವಾಸಿ ಎನ್ ರವಿಚಂದ್ರ ಎಂಬಾತ ಕೆಲಸಕ್ಕೆ ಇದ್ದು, ಡಿ.16 ರಂದು ಗಣೇಶ್ ಪ್ರಸಾದ್ ಶೆಟ್ಟಿ ಅವರಿಗೆ ಜ್ವರ ಇದ್ದ ಕಾರಣ ಅಂಗಡಿಯನ್ನು ನೋಡಿಕೊಳ್ಳುವಂತೆ ಎನ್ ರವಿಚಂದ್ರನಿಗೆ ತಿಳಿಸಿ ಅವರು ಮನೆಗೆ ಹೋಗಿದ್ದರು.
ಬಳಿಕ ಡಿ.18 ರಂದು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಗಣೇಶ್ ಪ್ರಸಾದ್ ಶೆಟ್ಟಿ ಅವರು ತಮ್ಮ ಅಂಗಡಿಯ ಪಕ್ಕದಲ್ಲಿರುವ ಮೆಡಿಕಲ್ ಶಾಫ್ ನಿಂದ ಔಷದಿಯನ್ನು ತೆಗೆದುಕೊಂಡು ಹೋಗಲು ಬಂದಾಗ ಅವರ ಅಂಗಡಿಯು ಬಂದ್ ಆಗಿದ್ದು ಅಂಗಡಿಯ ಎದುರು ನಿಂತಿದ್ದ ಆಟೋ ರಿಕ್ಷಾದಲ್ಲಿ 3 ಚೀಲ ಹಾಗೂ 2 ಬಾಕ್ಸ್ ನಲ್ಲಿ ಬಟ್ಟೆ ಇರುವುದು ಕಂಡು ಬಂದಿದೆ. ಈ ಬಗ್ಗೆ ಆಟೋ ರಿಕ್ಷಾ ಚಾಲಕನಲ್ಲಿ ವಿಚಾರಿಸಿದಾಗ ಆತನು ಎನ್ ರವಿಚಂದ್ರ ರವರು ಬಟ್ಟೆಯನ್ನು ತುಂಬಿಸಿ ಹೋಗಿದ್ದು ಮನೆಗೆ ತಂದು ಹಾಕುವಂತೆ ತಿಳಿಸಿದ್ದಾಗಿ ಹೇಳಿದ್ದಾನೆ.
ಈ ವಿಚಾರವಾಗಿ ಎನ್. ರವಿಚಂದ್ರನಿಗೆ ಪೋನ್ ಮಾಡಿದಲ್ಲಿ ಆತನ ಫೋನ್ ಸ್ವಿಚ್ ಆಫ್ ಆಗಿದ್ದು, ಈತನು ಅಂಗಡಿಯ ಕೀಯನ್ನು ಹಾಗೂ 3 ಲಕ್ಷ ರೂ. ಮೊತ್ತದ ಬಟ್ಟೆಯನ್ನು ಕಳವು ಮಾಡಿಕೊಂಡು ಹೋಗಿದ್ದು ಅಲ್ಲದೇ ನಂತರ ಅಂಗಡಿಯ ಬಟ್ಟೆಯನ್ನು 2 ಲಕ್ಷ ರೂ. ಹಣ ನೀಡಿದರೆ ಬಿಟ್ಟು ಕೊಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.