ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ರಜತ ಸಂಭ್ರಮ
ಉಡುಪಿ, ಡಿ.19: ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ರಜತ ಸಂಭ್ರಮ ಕಾರ್ಯಕ್ರಮವು ಶೋಕ ಮಾತಾ ಇಗರ್ಜಿ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉನ್ನತ ಆದರ್ಶಗಳನ್ನು ಪಾಲಿಸಿಕೊಂಡು ಪ್ರಗತಿ ಹೊಂದುತ್ತಿರುವ ಸಹಕಾರಿ ಸಂಸ್ಥೆಗಳು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿವೆ. ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಈ ಕಾರ್ಯದಲ್ಲಿ ಮಾದರಿಯಾಗಿದ್ದು ಈ ರೀತಿಯ ಸಮಾಜಮುಖಿ ಕಾರ್ಯ ದೇವರ ಸೇವೆಗೆ ಸಮ. 25 ವರ್ಷಗಳ ಹಿಂದೆ ಆರಂಭಗೊಂಡ ಈ ಸಹಕಾರಿ ಸಂಸ್ಥೆ ಸೇವಾ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ. ಉತ್ತಮ ಆದರ್ಶ, ಧೈಯದೊಂದಿಗೆ ಆರಂಭಗೊಂಡ ಸಂಸ್ಥೆ ಇಂದು ಹೆಮ್ಮರವಾಗಿದೆ ಎಂದು ಹೇಳಿದರು.
ಈ ವೇಳೆ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ ನ ರೆಕ್ಟರ್ ವಂ| ವಲೇರಿಯನ್ ಮೆಂಡೋನ್ಸಾ, ಶೋಕ ಮಾತಾ ಇಗರ್ಜಿಯ ಧರ್ಮಗುರು ವಂ| ಚಾಲ್ರ್ಸ್ ಮಿನೇಜಸ್ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಿಸಲಾಯಿತು.
ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಅಲೋಶಿಯಸ್ ಡಿ’ ಅಲ್ಮೇಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಉಡುಪಿ ಪ್ರದೇಶ ಕೆಥೋಲಿಕ್ ಸಭಾದ ಅಧ್ಯಕ್ಷೆ ಮೇರಿ ಡಿ’ಸೋಜಾ, ಆಡಳಿತ ಮಂಡಳಿ ನಿರ್ದೇಶಕರಾದ ಇಗ್ನೇಷಿಯಸ್ ಮೋನಿಸ್, ಫ್ರಾಂಕ್ಲಿನ್ ಮಿನೇಜಸ್, ಫೆಲಿಕ್ಸ್ ಪಿಂಟೋ, ಜೇಮ್ ಡಿ’ಸೋಜಾ, ಪರ್ಸಿ ಕೆ. ಡಿ’ಸೋಜಾ, ಆರ್ಚಿಬಾಲ್ಡ್ ಎಸ್. ಡಿ’ಸೋಜಾ, ಕೆವಿನ್ ಆರ್. ಪಿರೇರಾ, ಜೆಸಿಂತಾ ಡಿ’ಸೋಜಾ, ಗಿಲ್ಬರ್ಟ್ ಫೆರ್ನಾಂಡಿಸ್, ಡಾ| ನೇರಿ ಕರ್ನೇಲಿಯೋ, ಲೋಯ್ಸೆಟ್ ಜೆ. ಕರ್ನೇಲಿಯೋ, ಸೊಸೈಟಿಯ ಉಪಾಧ್ಯಕ್ಷ ಲೂವಿಸ್ ಲೋಬೊ, ಪ್ರಧಾನ ವ್ಯವಸ್ಥಾಪಕ ಸಂದೀಪ್ ಎ. ಫೆರ್ನಾಂಡಿಸ್, ಮೈಕಲ್ ಡಿ’ಸೋಜಾ ಉಪಸ್ಥಿತರಿದ್ದರು.