ಗ್ರಾಹಕರಿಗೆ ನೂರಾರು ಕೋಟಿ ವಂಚಿಸಿದ ಉಡುಪಿಯ ಸಹಕಾರ ಸಂಘ: ಕಚೇರಿ ಮುಂದೆ ಜಮಾಯಿಸಿದ ಗ್ರಾಹಕರು- ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ

ಉಡುಪಿ ಡಿ.19(ಉಡುಪಿ ಟೈಮ್ಸ್ ವರದಿ): ಗ್ರಾಹಕರಿಗೆ ನೂರಾರು ಕೋಟಿ ವಂಚಿಸಿದ ಉಡುಪಿಯ ಸಹಕಾರ ಸಂಘ ಎದುರು ಇಂದು ಮುಂಜಾನೆಯಿಂದಲೇ 50ಕ್ಕೂ ಅಧಿಕ ಠೇವಣಿದಾರರು ಜಮಾಸಿದ್ದರು.

ಗ್ರಾಹಕರು ಕಚೇರಿ ಮುಂದೆ ಇದ್ದರೂ ನಿಗದಿತ ಸಮಯಕ್ಕೆ ಕಚೇರಿಯನ್ನು ತೆರೆಯದೇ ತಡವಾಗಿ ಕಚೇರಿಯನ್ನು ತೆರೆದಿದ್ದು, ಈ ವೇಳೆ ಗ್ರಾಹಕರು ಕಚೇರಿ ಒಳ ನುಗ್ಗಿ ನ್ಯಾಯಕ್ಕಾಗಿ ಆಗ್ರಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಚೇರಿಯ ಮಹಿಳಾ ಸಿಬ್ಬಂದಿಯೋರ್ವರು ಗ್ರಾಹಕರ ಎದುರೇ 4-5 ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

ಬಳಿಕ ಗ್ರಾಹಕರೇ ಸಿಬ್ಬಂದಿ ನುಂಗಿದ ಮಾತ್ರೆಯನ್ನು ವಾಂತಿ ಮಾಡುವಂತೆ ಮಾಡಿ ರಕ್ಷಿಸಿದ್ದಾರೆ. ಈ ಹಿಂದೆ ಇಂತಹದ್ದೇ ಸಮಸ್ಯೆ ಆದ ಸಂದರ್ಭದಲ್ಲಿಯೂ ಈ ಕಚೇರಿಯ ಸಿಬ್ಬಂದಿಯೊಬ್ಬರು ಇದೇ ರೀತಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇಲ್ಲಿ ಇಷ್ಟೊಂದು ಸಮಸ್ಯೆಗಳು ನಡೆಯುತ್ತಿದ್ದರೂ ಇನ್ನೂ ಯಾವುದೇ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೀಗ ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕರ ವಿರುದ್ಧ ನೆರೆದಿದ್ದ ವಂಚನೆಗೆ ಒಳಗಾದ ಗ್ರಾಹಕರು ನಗರ ಠಾಣೆಗೆ ದೂರು ನೀಡಿದ್ದಾರೆ.

ಸಂಘದಲ್ಲಿ ಇಟ್ಟ ಠೇವಣಿಯ ಬಡ್ಡಿ, ವಾಯಿದೆ ಮುಗಿದ ಹಾಗೂ ವಾಯಿದ ಪೂರ್ವ ಠೇವಣಿಯ ಮೊತ್ತವನ್ನು ಹಿಂತಿರುಗಿಸದೆ ಮೋಸ ಮಾಡುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಉಡುಪಿಯ ಕೃಷ್ಣಾಪುರ ಮಠದ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಗ್ರಾಹಕರು ಜೀವನ ಪರ್ಯಾಂತ ದುಡಿದು ಜೀವನಾಂಶಕ್ಕೆಂದು ಹಣವನ್ನು ತಿಂಗಳಿಗೆ 12% ರ ಬಡ್ಡಿ ದರದಂತೆ ನಿರಖು ಠೇವಣಿಯನ್ನಾಗಿ ಇಟ್ಟಿದ್ದರು. ಅಂದಿನಿಂದ ಕಳೆದ ಜೂನ್ ತಿಂಗಳವರೆಗೆ ಸಂಸ್ಥೆಯವರು ಸರಿಯಾಗಿ ಬಡ್ಡಿ ಪಾವತಿಸಿದ್ದು ಜೂನ್ ನಂತರ ಬಡ್ಡಿಯನ್ನು ಪಾವತಿಸಿರುವುದಿಲ್ಲ ಹಾಗೂ ವಾಯಿದೆ ಮುಗಿದ ನಿರಖು ಠೇವಣಿಯನ್ನು ಮರಳಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಲವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಕೆಲವರು ಮಕ್ಕಳ ಮದುವೆ ಮುಂಜಿಗಾಗಿ ಇಟ್ಟಿರುವ ನಿರಖು ಠೇವಣಿಯನ್ನ ವಾಯಿದೆ ಪೂರ್ವ ಹಿಂತಿರುಗಿಸಿ ಕೊಡಲು ಕೇಳಿದಾಗ ಸಂಸ್ಥೆಯಲ್ಲಿ ಹಣ ಇಲ್ಲ, ಬಾಕಿದಾರರ ವಸೂಲಾತಿ ಸರಿಯಾಗಿ ನಡೆಯುತ್ತಿಲ್ಲ. ಮುಂದಿನ ವಾರ ಖಂಡಿತಾ ಕೊಡುತ್ತೇನೆ ಎಂಬುದಾಗಿ ಸುಮಾರು ತಿಂಗಳಿಂದ ಕೇವಲ ಆಶ್ವಾಸನೆ ನೀಡುತ್ತಿದ್ದಾರೆಯೇ ವಿನಃ ಇದುವರೆಗೂ ಯಾರಿಗೂ ಹಣ ಹಿಂತಿರುಗಿಸದೆ ಮೋಸ ಮಾಡುತ್ತಿದ್ದಾರೆ ಎಂದು ಸಂಘದ ವಿರುದ್ಧ ಆರೋಪ ಮಾಡಿದ್ದಾರೆ.

ಸಂಘದ ಅಧ್ಯಕ್ಷ ಬಿ.ವಿ ಲಕ್ಷ್ಮೀನಾರಾಯಣ ಉಪಾಧ್ಯಾಯ ಕಳೆದ ನ.10 ರಂದು ಬೋರ್ಡ್ ಮೀಟಿಂಗ್ ಕರೆದು ಎಲ್ಲಾ ಗ್ರಾಹಕರ ಹಣ ವಾಪಾಸ್ ಕೊಡುವ ಬಗ್ಗೆ ವಾಗ್ದಾನ ನೀಡಿದ್ದರು. ಆದರೆ ಅಂದು ಸಭೆ ಮಾಡಲು ಡಿ.ಆರ್. ಆಫೀಸಿನಿಂದ ಬರಬೇಕಾದ ಅಧಿಕಾರಿ ಬಾರದೇ ಇದ್ದುದರಿಂದ ಸಭೆ ರದ್ದು ಆಗಿತ್ತು ಎಂಬುದಾಗಿ ಸಬೂಬು ಹೇಳಿ ಗ್ರಾಹಕರನ್ನು ನಂಬಿಸಿದರು.

ಆದರೆ ಈ ಬಗ್ಗೆ ಡಿಆರ್ ಆಫೀಸಿನಲ್ಲಿ ವಿಚಾರಿಸಿದಾಗ ಆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂಬುದಾಗಿ ಅಲ್ಲಿ ತಿಳಿಸಿದ್ದಾರೆ. ಆ ಬಳಿಕ ಈ ಬಗ್ಗೆ ಪ್ರತೀ ದಿನ ಸೊಸೈಟಿ ಕಚೇರಿಗೆ ಹೋದಾಗಲೂ ವಾರ ಬಿಟ್ಟು ವಾರದ ಮೇಲೆ ತಾರೀಖು ಕೊಟ್ಟು ಸತಾಯಿಸುತ್ತಿದ್ದಾರೆ. ಅಲ್ಲದೆ ನೂರಾರು ಗ್ರಾಹಕರ ದಂಡು ದಿನ ನಿತ್ಯ ಕಚೇರಿಗೆ ಬರುತ್ತಿದ್ದು ಯಾರಿಗೂ ಹಣ ವಾಪಾಸು ಕೊಟ್ಟಿಲ್ಲ. ಅವರು ಹೆಚ್ಚಿನ ಬಡ್ಡಿ ಕೊಡುತ್ತೇವೆ ಅಂತ ಕಾಪು ತಾಲೂಕಿನ ಶಿರ್ವದಲ್ಲಿ ಶಾಖೆ ತೆರೆದು ಗ್ರಾಹಕರಿಂದ ನಿರಖು ಠೇವಣಿಯನ್ನು ಪಡೆದು ಅಲ್ಲಿನ ಶಾಖೆಯನ್ನೂ ಮುಚ್ಚಿದ್ದಾರೆ ಎಂದು ತಿಳಿಸಿದ್ದಾರೆ.

ಸಂಘದ ಅಧ್ಯಕ್ಷರಾದ ಬಿವಿ ಲಕ್ಷ್ಮೀ ನಾರಾಯಣ ಉಪಾಧ್ಯಾಯ, ಬಿ.ಕೆ.ವೆಂಕಯ್ಯ, ಕಮಲ ನೇತ್ರ, ಹಾಗೂ ಟ್ರಸ್ಟಿಗಳಾದ ಬಡಗುಪೇಟೆಯ ರವಿ ಉಪಾಧ್ಯಾಯ, ಬಿ.ವಿ.ಬಾಲಕೃಷ್ಣ, ಭಾಸ್ಕರ ಉಪಾಧ್ಯ, ಉದಯ ಉಪಾಧ್ಯ ,ರಾಧಿಕಾ, ಸುಜಾತ ಮೊದಲಾದವರು ತಮ್ಮ ಕುಟುಂಬದ ಸದಸ್ಯರನ್ನೇ ಒಳಗೊಂಡ ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘದಲ್ಲಿ ಊರಿನ ಹಾಗೂ ಪರವೂರಿನ ನೂರಾರು ಜನರು ಇಟ್ಟಿರುವ ಠೇವಣಿಯ ಕೋಟಿಗಟ್ಟಲೆ ಹಣ ಮೋಸ ಮಾಡುತ್ತಿರುವುದು ಗಮನಿಸಿದರೆ ಇದರ ಹಿಂದೆ ಏನೋ ಒಂದು ದೊಡ್ಡ ಮೋಸದ ಜಾಲ ಇರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

ಹಾಗೂ ಇದು ಉಡುಪಿಯಲ್ಲಿ ನಡೆಯಬಹುದಾದ ಒಂದು ಬಹು ದೊಡ್ಡ ಹಗರಣವಾಗುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಗ್ರಾಹಕರ ಠೇವಣಿ ಹಾಗೂ ಬಡ್ಡಿಯನ್ನು ಕೂಡಲೇ ಪಾವತಿಸುವಂತೆ ಕ್ರಮಕೈಗೊಂಡು ಗ್ರಾಹಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನೊಂದ ಗ್ರಾಹಕರು ಮನವಿ ಮಾಡಿಕೊಂಡಿದ್ದಾರೆ.

2 thoughts on “ಗ್ರಾಹಕರಿಗೆ ನೂರಾರು ಕೋಟಿ ವಂಚಿಸಿದ ಉಡುಪಿಯ ಸಹಕಾರ ಸಂಘ: ಕಚೇರಿ ಮುಂದೆ ಜಮಾಯಿಸಿದ ಗ್ರಾಹಕರು- ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ

  1. ಮೇಲಿನ ಮುದ್ರಣ ದೋಷವನ್ನು ತಿದ್ದುಪಡಿ ಮಾಡಿದ್ದಕ್ಕೆ ಧನ್ಯವಾದಗಳು.

Leave a Reply

Your email address will not be published. Required fields are marked *

error: Content is protected !!