46 ಸಾವಿರ ನೇಕಾರರ ಕುಟುಂಬದ ಮಕ್ಕಳಿಗೆ ವಿದ್ಯಾನಿಧಿ ಯೋಜನೆ-ಶೀಘ್ರ ಬಿಡುಗಡೆ: ಸಿಎಂ ಬೊಮ್ಮಾಯಿ

ಬೆಂಗಳೂರು, ಡಿ.16 : 46 ಸಾವಿರ ನೇಕಾರ ಕುಟುಂಬಗಳ ವಿದ್ಯಾರ್ಥಿಗಳನ್ನು ವಿದ್ಯಾನಿಧಿ ಯೋಜನೆಗೆ ಗುರುತಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನೇಕಾರ್ ಸಮ್ಮಾನ್ ಯೋಜನೆಯಡಿ ಕೈಮಗ್ಗ ನೇಕಾರರಿಗೆ ಡಿಬಿಟಿ ಮೂಲಕ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಿ ಮಾತನಾಡಿದ ಅವರು, 46 ಸಾವಿರ ನೇಕಾರ ಕುಟುಂಬದ ವಿದ್ಯಾರ್ಥಿಗಳ ದಾಖಲೆಗಳನ್ನು ಹದಿನೈದು ದಿನದೊಳಗೆ ಪಡೆದು ಪಟ್ಟಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ವಿದ್ಯಾರ್ಥಿಗಳಿಗೆ ಕೂಡಲೇ ವಿದ್ಯಾನಿಧಿಯನ್ನು ಬಿಡುಗಡೆ ಮಾಡಲಾಗುವುದು. ವಿದ್ಯಾನಿಧಿ ಮಕ್ಕಳ ಹಕ್ಕು ಇದಕ್ಕಾಗಿ ಮಕ್ಕಳಿಂದ ಯಾವುದೇ ರೀತಿಯ ಅರ್ಜಿಯನ್ನು ಪಡೆಯುವುದಿಲ್ಲ ಎಂದು ತಿಳಿಸಿದರು.

ನೇಕಾರರ ಕಸುಬನ್ನು ಉನ್ನತೀಕರಿಸಿ ಉಳಿಸುವುದು ಬಹಳ ಮುಖ್ಯ. ಅದರ ಜೊತೆಗೆ ಅವರ ಆರೋಗ್ಯ ಹಿತ ದೃಷ್ಟಿಯಿಂದ ಕೈಮಗ್ಗ ನೇಕಾರರ ಕಾಳಜಿ ವಹಿಸಲು ನೇಕಾರ ಸಮ್ಮಾನ್ ಯೋಜನೆಯಡಿ 2000 ರೂ.ಗಳ ಆರ್ಥಿಕ ನೆರವನ್ನು 5ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಹಾಗೂ ಅವರ ಹತ್ತು ಹಲವಾರು ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ನಾಳೆ ವಿದ್ಯುತ್ಛಕ್ತಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಲಾಗುತ್ತಿದೆ. ಇದರೊಂದಿಗೆ ನೇಕಾರ ಸಮ್ಮಾನ್ ಯೋಜನೆಯಡಿ 46,864 ಫಲಾನುಭವಿಗಳಿಗೆ 5000 ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಒಟ್ಟು 23.43 ಕೋಟಿ ರೂ.ಗಳು ನೇರವಾಗಿ ನೇಕಾರರ ಬ್ಯಾಂಕ್ ಖಾತೆಗೆ ವರ್ಗಾವಣೆಗೆ ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಕ್ಕರೆ, ಜವಳಿ ಮತ್ತು ಕೈಮಗ್ಗ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕಿ ಪೂರ್ಣಿಮಾ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!