“ಸಾರ್ವಜನಿಕ ಟ್ರಸ್ಟ್ ನ್ನು ರಕ್ಷಣೆ ಮಾಡಬೇಕಾದ್ದು ಸರ್ಕಾರ: ಮಠಗಳು ಶಾಸನಾತೀತವೇ?
ಬೆಂಗಳೂರು ಡಿ.17 : ಪೋಕ್ಸೊ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀ ಪ್ರಕರಣಕ್ಕೆ ಸಂಬಂಧಿಸಿ ಮಠಗಳು ಶಾಸನಾತೀತವೇ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಡಿ.ಎಸ್.ಮಲ್ಲಿಕಾರ್ಜುನ ಸೇರಿದಂತೆ ಮೂವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ‘ನಿಮ್ಮ ಅರ್ಜಿಯಲ್ಲಿ ಕೇವಲ ಲಿಂಗಾಯತ ಮಠ ಎಂದಷ್ಟೇ ಕಾಣಿಸಿದ್ದೀರಿ, ರಿಲಿಜಿಯಸ್ ಡಿನಾಮಿನೇಷನ್ ಅನ್ನು ಪುಷ್ಟಿಕರಿಸುವ ಯಾವುದೇ ಅಂಶಗಳಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿ, ‘ಕೇವಲ, ನಾನು ಇಂಗ್ಲೆಂಡಿನ ರಾಜ ಎಂದರೆ ಆಗುವುದಿಲ್ಲ. ಅದನ್ನು ಸಾಬೀತುಪಡಿಸುವ ದಾಖಲೆ, ಪುರಾವೆಗಳನ್ನು ನ್ಯಾಯಪೀಠಕ್ಕೆ ಒದಗಿಸಬೇಕಲ್ಲವೇ’ ಎಂದು ಅರ್ಜಿದಾರ ಪರ ವಕೀಲ ಜಯಕುಮಾರ್ ಎಸ್.ಪಾಟೀಲರನ್ನು ಪ್ರಶ್ನಿಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವಕೇಟ್ ಜನರಲ್ ಹೈಕೋರ್ಟ್ ಅವರು, ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು, 2 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಪೆÇಕ್ಕೊ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಜೈಲಿನಿಂದಲೇ ತಮ್ಮ ಆಣತಿಯ ಅನುಸಾರ ಮಠ ಮತ್ತು ವಿದ್ಯಾಸಂಸ್ಥೆಗಳ ಆಡಳಿತ ನಡೆಸುವುದಾದರೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗೆ ಭಾರಿ ಹಾನಿಯುಂಟಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.
‘ಶರಣರು ಮಠ ಮತ್ತು ವಿದ್ಯಾಪೀಠಕ್ಕೆ ಏಕೈಕ (ಸೋಲ್) ಟ್ರಸ್ಟೀ ಮತ್ತು ಅಧ್ಯಕ್ಷರಾಗಿತಕ್ಕದ್ದು ಎಂದು 2010ರ ನವೆಂಬರ್ 26ರಂದು ಟ್ರಸ್ಟ್ ಡೀಡ್ ನಿಗದಿಪಡಿಸಲಾಗಿದೆ. ಇದರ ಅನುಸಾರ ಶರಣರು ಮಠ ಮತ್ತು ವಿದ್ಯಾಪೀಠಗಳ ಆಡಳಿತದ ಸಂಪೂರ್ಣ ಅಧಿಕಾರ ಹೊಂದಿದ್ದಾರೆ. ವಿದ್ಯಾಪೀಠದ ಅಡಿಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ 105 ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಸಾವಿರಾರು ನೌಕರರು ದುಡಿಯುತ್ತಿದ್ದಾರೆ. ಈ ಟ್ರಸ್ಟ್ ಸಾರ್ವಜನಿಕ ಟ್ರಸ್ಟ್. ಹೀಗಾಗಿ ಶರಣರು ಜೈಲು ಸೇರಿರುವ ಕಾರಣ ಈ ಸಾರ್ವಜನಿಕ ಟ್ರಸ್ಟ್ ಅನ್ನು ಸರ್ಕಾರ ರಕ್ಷಣೆ ಮಾಡಬೇಕಿದ್ದು ಅದಕ್ಕಾಗಿಯೇ ಆಡಳಿತಾಧಿಕಾರಿ ನೇಮಕ ಮಾಡಿದೆ’ ಎಂದು ಅಡ್ವಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ವಿವರಿಸಿದರು.
ಅರ್ಜಿದಾರರ ಪರ ವಕೀಲ ಜಯಕುಮಾರ್ ಎಸ್.ಪಾಟೀಲ್, ‘ಸರ್ಕಾರ ಸಂವಿಧಾನದ 162ನೇ ವಿಧಿಯಡಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಕಾನೂನು ಬಾಹಿರ. ಮಠಗಳ ಮೇಲೆ ನಿಯಂತ್ರಣ ಹೊಂದಲು ಕಾನೂನಿನಲ್ಲಿ ಅವಕಾಶವಿಲ್ಲ. ಸಿವಿಲ್ ಪೆÇ್ರಸೀಜರ್ ಕೋಡ್ ಅನುಸಾರ ಕಲಂ 92ರ ಅಡಿಯಲ್ಲಿ ನಿಯಂತ್ರಣ ಹೊಂದಬಹುದು. ಆದ್ದರಿಂದ, ಈ ಪ್ರಕರಣದಲ್ಲಿ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.
ಹಾಗೂ ‘ಪ್ರತಿಯೊಂದು ಧಾರ್ಮಿಕ ಪಂಗಡಗಳಿಗೆ (ರಿಲಿಜಿಯಸ್ ಡಿನಾಮಿನೇಷನ್-ಮಠ) ಸಂವಿಧಾನದತ್ತವಾದ ಕೆಲವೊಂದು ಮೂಲಭೂತ ಹಕ್ಕುಗಳನ್ನು ಅನುಭವಿಸಲು ಅವಕಾಶವಿರುತ್ತದೆ. ಇದನ್ನು ಸುಪ್ರೀಂ ಕೋರ್ಟ್ ಶಿರೂರು ಮಠ ಪ್ರಕರಣದಲ್ಲಿ ಈ ಹಿಂದೆಯೇ ಸ್ಪಷ್ಟಪಡಿಸಿದೆ’ ಎಂದರು.