‘ಬೈಜೂಸ್’ನ ಸಿಒಒಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೋಟಿಸ್
ನವದೆಹಲಿ ಡಿ.17 : ಕೋರ್ಸ್ ಖರೀದಿಸಲು ಆಮೀಷ ಒಡ್ಡಿರುವ ಆರೋಪದ ಮೇಲೆ ಬೆಂಗಳೂರು ಮೂಲದ ಎಜುಟೆಕ್ ಸ್ಟಾರ್ಟಪ್ ಕಂಪನಿ ‘ಬೈಜೂಸ್’ನ ಸಿಒಒ ಬೈಜೂ ರವೀಂದ್ರನ್ ಅವರಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ವಿಚಾರಣೆಗೆ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ರವೀಂದ್ರನ್ ಅವರು ಬೈಜೂಸ್‍ನಲ್ಲಿ ಕೋರ್ಸ್‍ಗಳನ್ನು ಖರೀದಿ ಮಾಡಲು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಮೀಷ ಒಡ್ಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಗ್ರಾಹಕರ ಹಕ್ಕು ರಕ್ಷಣಾ ವೆಬ್‍ಸೈಟ್‍ಗಳಲ್ಲಿ ದೂರುಗಳ ಕೇಳಿ ಬಂದಿದ್ದವು. ಅಲ್ಲದೆ ನಮ್ಮ ವಿರುದ್ಧ ದಬ್ಬಾಳಿಕೆ ಮಾಡಿ ಹಣ ಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಹಲವು ಪೋಷಕರು ದೂರು ನೀಡಿದ್ದರು ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೀಡಿರುವ ಮಾಹಿತಿಯಲ್ಲಿ “ಪೋಷಕರು ಹಾಗೂ ಮಕ್ಕಳಿಗೆ ಆಮಿಷ ಒಡ್ಡುವ ದುಷ್ಕøತ್ಯ ಎಸಗಿ, ಸಾಲ ಒಪ್ಪಂದಗಳ ಮೂಲಕ ಮಕ್ಕಳ ಕಲ್ಯಾಣಕ್ಕೆ ತಡೆ ಒಡ್ಡುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ರವೀಂದ್ರನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹಾಗೂ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು. ಇದರ ಜೊತೆಗೆ ಮಕ್ಕಳಿಗೆ ಬೈಜೂಸ್ ಒದಗಿಸುತ್ತಿರುವ ಕೋರ್ಸ್, ಪಠ್ಯ ರಚನೆ, ಶುಲ್ಕ, ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ, ಕಂಪನಿಯ ಹಣ ಮಾರುಪಾವತಿ ನೀತಿ ಮುಂತಾದವುಗಳ ಬಗ್ಗೆ ಮಾಹಿತಿಯೊಂದಿಗೆ ಎಜು-ಟೆಕ್ ಕಂಪನಿಯಾಗಿ ನೋಂದಣಿಯಾಗಿರುವುದರ ಬಗ್ಗೆಯೂ ದಾಖಲೆಯನ್ನೂ ನೀಡುವಂತೆ ಸೂಚನೆ ನೀಡಿದೆ ಎಂಬುದಾಗಿ ತಿಳಿಸಲಾಗಿದೆ.