ಉಡುಪಿ: ಟೆಸ್ಟ್ ಡ್ರೈವ್ ಬೈಕ್ ನಲ್ಲಿ ಸರಗಳನ್ನು ಸೆಳೆದು ಪರಾರಿಯಾಗುತ್ತಿದ್ದ ಆರೋಪಿ ಅಂದರ್

ಉಡುಪಿ(ಉಡುಪಿ ಟೈಮ್ಸ್ ವರದಿ): ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆಯುತ್ತಿರುವ ಮಹಿಳೆಯರ ಸರಗಳನ್ನು ಸೆಳೆದು ಪರಾರಿಯಾಗುತ್ತಿದ್ದ ಆರೋಪಿಯೊಬ್ಬನನ್ನು ಉಡುಪಿ ಪೊಲೀಸರು ಬಂದಿಸಿದ್ದಾರೆ.

ಬಂಧಿತನನ್ನು ಮಂಗಳೂರು ಮೂಲದ ಚಂದ್ರಶೇಖರ್ (25)ಎಂದು ಗುರುತಿಸಲಾಗಿದೆ.   ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಯು, ಸರಗಳ್ಳತನ ಮಾಡುವ ಉದ್ದೇಶದಿಂದ ಮಂಗಳೂರಿನ ಕಂಕನಾಡಿಯ ಗೋರಿಗುಡ್ಡೆ ಎಂಬಲ್ಲಿನ ಸೆಕೆಂಡ್ ಹ್ಯಾಂಡ್ ಬಝಾರ್ ನಲ್ಲಿ ಬೈಕ್ ಖರೀದಿಸಲು ಟೆಸ್ಟ್ ಡ್ರೈವ್ ಮಾಡುವುದಾಗಿ ಸುಳ್ಳು ಹೇಳಿ ಕದ್ದಿರುವುದಾಗಿ ತಿಳಿಸಿದ್ದಾನೆ.

ಅಲ್ಲದೆ ಈ ಬೈಕ್ ಮೂಲಕ ಮಂಗಳೂರು, ಉಡುಪಿ‌ಯ ಸೈಂಟ್ ಸಿಸಿಲಿ ಶಾಲೆ, ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಇಂದ್ರಾಳಿ, ಇನ್ನು ಉಳಿದ ಕಡೆಗಳಲ್ಲಿ ಒಂಟಿ ಮಹಿಳೆಯರು ನಡೆದುಕೊಂಡು ಹೋಗುತ್ತಿರುವಾಗ ಅವರಿಂದ ಚಿನ್ನದ ಸರಗಳನ್ನು ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದರ ಜೊತೆಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿಯು, ಮಂಗಳೂರು ನಗರದ ಬರ್ಕೆ, ಮಣಿಪಾಲ ಠಾಣೆ ಹಾಗೂ ಕಂಕನಾಡಿ ಠಾಣಾ ವ್ಯಾಪ್ತಿಯಿಂದ ತಲಾ ಒಂದೊಂದು ಬೈಕ್‌ನ್ನು ಮೋಸದಿಂದ ಪಡೆದು, ಅದೇ ಬೈಕ್‌ನ್ನು ‌ಸರಗಳ್ಳತನ ಮಾಡಲು ಉಪಯೋಗಿಸಿರುವುದಾಗಿ ತಿಳಿಸಿರುತ್ತಾನೆ.

ಅರೋಪಿಯು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ 4 ಸರಗಳ್ಳತನ, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ 2 ಸರಗಳ್ಳತನ, ಪಡುಬಿದ್ರೆ ಠಾಣಾ ವ್ಯಾಪ್ತಿಯಲ್ಲಿ 1 ಸರಗಳ್ಳತನ, ಮಂಗಳೂರು ನಗರದ ಕದ್ರಿ, ಮೂಲ್ಕಿಯಲ್ಲಿ ಸರಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. 

ಇತ್ತೀಚಿನ ದಿನಗಳಲ್ಲಿ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಾರಿ ಎನ್ ವಿಷ್ಣುವರ್ಧನ್ , ಹಾಗೂ  ಹೆಚ್ಚುವರಿ ಪೊಲೀಸ್ ಅಧೀಕ್ಷಕ  ಕುಮಾರಚಂದ್ರ ರವರ ಮಾರ್ಗದರ್ಶನದಲ್ಲಿ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ  ಟಿ.ಆರ್ ಜೈಶಂಕರ್ ಹಾಗೂ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ  ಭರತ್ ರೆಡ್ಡಿ ರವರ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಈ ನಿಟ್ಟಿನಲ್ಲಿ ಜ. 3 ರಂದು ಪೊಲೀಸರು ಕಾರ್ಯಪ್ರವೃತ್ತರಾಗಿದ್ದ ವೇಳೆ, ಉಡುಪಿಯ ಸರಗಳ್ಳತನ ಪ್ರಕರಣದಲ್ಲಿ ಸಿಸಿಟಿವಿಯಲ್ಲಿ ಸೆರೆಯಾದ ಫುಟೇಜ್ ನಲ್ಲಿ ಪತ್ತೆಯಾದ ಮಾದರಿಯ ಸ್ಕೂಟರ್ ನಲ್ಲಿ ವ್ಯಕ್ತಿಯೋರ್ವ ಸಂಶಯಾಸ್ಪದ ರೀತಿಯಲ್ಲಿ ಅಲೆವೂರಿನಿಂದ ಡಯಾನ ಕಡೆಗೆ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಬಂಧಿತನಿಂದ ಒಟ್ಟು 172.02 ಗ್ರಾಂ ಚಿನ್ನ. 3 ದ್ವಿಚಕ್ರ ವಾಹನ ಸೇರಿ ಒಟ್ಟು 9,38,200 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 

ಈತನು ಈ ಹಿಂದೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಗಳ್ಳತನ ಪ್ರಕರಣದ‌ ಆರೋಪಿಯಾಗಿದ್ದು ಇನ್ನೂ ಹೆಚ್ಚಿನ ಕಡೆಗಳಲ್ಲಿ ಕಳ್ಳತನ ಕೃತ್ಯ ಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಉಡುಪಿ ನಗರ ಸಿಪಿಐ ಮಂಜುನಾಥ್ ಅವರು ತನಿಖೆ ನಡೆಸುತ್ತಿದ್ದಾರೆ. 

ಈ ಕಾರ್ಯಾಚರಣೆಯಲ್ಲಿ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ  ಟಿ.ಅರ್ ಜೈಶಂಕರ್ ಹಾಗೂ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಭರತ್ ರೆಡ್ಡಿ, ಉಡುಪಿ ನಗರ ಸಿ.ಪಿ.ಐ ಮಂಜುನಾಥ ಹಾಗೂ ಸಿಬ್ಬಂದಿಯವರು, ಡಿಸಿಐಬಿ ಘಟಕದ ಪಿ.ಐ ಮಂಜಪ್ಪ ಡಿ.ಆರ್ ಹಾಗೂ ಸಿಬ್ಬಂದಿಯವರು, ಮಣಿಪಾಲ ಠಾಣಾ ಪಿ.ಐ  ಮಂಜುನಾಥ ಹಾಗೂ ಸಿಬ್ಬಂದಿಯವರು, ಕಾವು ಸಿಪಿಐ  ಪ್ರಕಾಶ್ ಮತ್ತು ಸಿಬ್ಬಂದಿಗಳು, ಉಡುಪಿ ನಗರ ಠಾಣಾ ಪಿಎಸ್‌ಐ  ಸಕ್ತಿವೇಲು, ಅಪರಾಧ ವಿಭಾಗದ ಪಿ ಎಸ್‌ಐ  ವಾಸಪ್ಪ ನಾಯ್ಕ ಹಾಗೂ ಸಿಬ್ಬಂದಿಗಳು, ಮಣಿಪಾಲ ಪಿಎಸ್ಐ ರಾಜ್ ಶೇಖರ್ ಹಾಗೂ ಸಿಬ್ಬಂದಿಗಳು , ಮಲ್ಪೆ ಪಿಎಸ್ ಐ ತಿಮ್ಮೇಶ್ ಬಿ.ಎನ್,  ಹಾಗೂ ಸಿಬ್ಬಂದಿಗಳು ಕಾಪು ಪಿಎಸ್‌ಐ ರಾಘವೇಂದ್ರ ಹಾಗೂ ಸಿಬ್ಬಂದಿಗಳು, ಪಡುಬಿದ್ರಾ ಠಾಣಾ ಸಿಬ್ಬಂದಿಗಳು, ಉಡುಪಿ ಸಂಚಾರ ಠಾಣಾ ಪಿಎಸ್‌ಐ ಅಬ್ದುಲ್ ಖಾದರ್ ಮತ್ತು ಶೇಖರ್ ಹಾಗೂ ತಾಂತ್ರಿಕ ವಿಭಾಗ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!