ದತ್ತಪೀಠ ಮಾರ್ಗದಲ್ಲಿ ಮೊಳೆ ಚೆಲ್ಲಿದ್ದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು ಡಿ.16 : ದತ್ತ ಪೀಠದ ಕಡಿದಾದ ತಿರುವುಗಳಲ್ಲಿ ಮೊಳೆಗಳನ್ನು ಚೆಲ್ಲಿ ಅಪಘಾತಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.

ದುಬೈ ನಗರದ ಮೊಹಮದ್ ಶಹಬಾಸ್ (29) ಹಾಗೂ ವಾಹೀದ್ ಹುಸೇನ್ (21) ಬಂಧಿತ ಆರೋಪಿಗಳು.

ಈ ಬಗ್ಗೆ ಎಸ್.ಪಿ ಉಮಾ ಪ್ರಶಾಂತ್ ಅವರು ಪತ್ರಿಕಾ ಹೇಳಿಕೆ ಮೂಲಕ ಮಾಹಿತಿ ನೀಡಿದ್ದು, ಕೈಮರ ದತ್ತಪೀಠ ಓಡಾಡುವ ಮಾರ್ಗದಲ್ಲಿ ವಾಹನಗಳಿಗೆ ತೊಂದರೆಯಾಗಲಿ ಎಂಬ ಉದ್ದೇಶದಿಂದ ತಿರುವುಗಳಲ್ಲಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಚೆಲ್ಲಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೃತ್ಯ ನಡೆಸಿದ ಕಿಡಿಗೇಡಿಗಳ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಚಿಕ್ಕಮಗಳೂರು ನಗರದ ಹಾರ್ಡ್‍ವೇರ್ ಶಾಪ್ ನಲ್ಲಿ ಅದೇ ತೆರನಾದ ಮೊಳೆಗಳನ್ನು ಇಬ್ಬರು ವ್ಯಕ್ತಿಗಳು ನಾಲ್ಕು ಕೆ.ಜಿ ಖರೀದಿಸಿದ್ದು ಮಾಹಿತಿ ಲಭ್ಯವಾಗಿತ್ತು. ಈ ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಪತ್ತೆ ಹಚ್ಚಿದ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಾಗೂ ಈ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಮಾಹಿತಿ ಇದ್ದು, ಅವರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ತಂಡ ಕಾರ್ಯಪ್ರವೃತ್ತವಾಗಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!