ಡಿ.19 ರಿಂದ ಕರಾವಳಿ, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಬೆಂಗಳೂರು ಡಿ.16 : ಕಳೆದ ಒಂದು ವಾರದಿಂದ ಮಾಂಡೌಸ್ ಚಂಡಮಾರುತದ ಪ್ರಭಾವದಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ಹೆಚ್ಚಾಗಿತ್ತು. ಇದೀಗ ಮತ್ತೆ ಡಿ.19 ರಿಂದ 2 ದಿನಗಳ ಕಾಲ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.
ಮುನ್ಸೂಚನೆ ಪ್ರಕಾರ, ಡಿ.15 ರಂದು ದಕ್ಷಿಣ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗಲಿದೆ. ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ 5.8 ಕಿ.ಲೋ ಮೀಟರ್ ಎತ್ತರದ ಸುಳಿಗಾಳಿ ಕರ್ನಾಟಕ ಕರಾವಳಿಯ ವಿರುದ್ಧ ದಿಕ್ಕಿನಲ್ಲಿ ಸಾಗಿದ್ದರಿಂದ ಅದರ ಪ್ರಭಾವ ಉಂಟಾಗುವುದಿಲ್ಲ. ಶುಕ್ರವಾರದಿಂದ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.