ಬೆಳಗಾವಿ ಅಧಿವೇಶನ: ಹಲಾಲ್ ನಿಷೇಧಕ್ಕೆ ಖಾಸಗಿ ಮಸೂದೆ ಮಂಡನೆ
ಬೆಂಗಳೂರು ಡಿ.15 : ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ `ಹಲಾಲ್’ ಲೇಬಲ್ ಹಾಕಿದ ದಿನಸಿ, ಆಹಾರ ಪದಾರ್ಥಗಳ ಮಾರಾಟವನ್ನು ರಾಜ್ಯದಲ್ಲಿ ನಿಷೇಧಿಸುವ ಕುರಿತು ಖಾಸಗಿ ಮಸೂದೆ ಮಂಡನೆಯಾಗಲಿದೆ.
ಈ ವಿಚಾರವಾಗಿ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಖಾಸಗಿ ಮಸೂದೆ ಮಂಡಿಸಲಿದ್ದು, ಈ ಬಗ್ಗೆ ಅವರು ವಿಧಾನಪರಿಷತ್‍ನ ಹಂಗಾಮಿ ಸಭಾಪತಿಯವರಿಗೆ ನೋಟಿಸ್ ನೀಡಿ,ಆಹಾರ ಪದಾರ್ಥಗಳ ಮೇಲೆ
ಹಲಾಲ್’ ಲೇಬಲ್ ಹಾಕಿ ಮಾರುವುದನ್ನು ನಿಷೇಧಿಸಬೇಕು. ಇದಕ್ಕಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ’ಗೆ ಸೂಕ್ತ ತಿದ್ದುಪಡಿ ಅಗತ್ಯವಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಬೇಕಾಗಿದೆ’ ಎಂದು ಹೇಳಿದ್ದಾರೆ.
ಹಾಗೂ ‘ಹಲಾಲ್ ಪ್ರಮಾಣಪತ್ರವನ್ನು ಮುಸ್ಲಿಂ ಧಾರ್ಮಿಕ ಸಂಸ್ಥೆಗಳು ನೀಡುತ್ತವೆ. ಇದಕ್ಕೆ ಸರ್ಕಾರದ ಅನುಮತಿ ಪಡೆದಿಲ್ಲ. ಹೀಗೇ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಯಾವುದೇ ಧಾರ್ಮಿಕ ಸಂಸ್ಥೆಗಳಿಗೂ ನೀಡಿಲ್ಲ. ಎಫ್.ಎಸ್.ಎಸ್.ಎ.ಐ ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಗಳೂ ಪ್ರಮಾಣ ಪತ್ರ ನೀಡುವಂತಿಲ್ಲ’ ಎಂದು ಅವರು ನೋಟಿಸ್‍ನಲ್ಲಿ ವಿವರಿಸಿದ್ದಾರೆ.
ಇನ್ನು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲಾಲ್ ಹಾವಳಿ ಯಾವ ಮಟ್ಟಕ್ಕೆ ಮೇರೆ ಮೀರಿದೆ ಎಂದರೆ, ನೆರೆ ರಾಜ್ಯಗಳಲ್ಲಿ ನ ನರ್ಸಿಂಗ್ ಹೋಂಗಳು ಮತ್ತು ಖಾಸಗಿ ಆಸ್ಪತ್ರೆಗಳ ಮೇಲೂ ಹಲಾಲ್ ಬೋರ್ಡ್ ಹಾಕಿ, ಮುಸ್ಲಿಂ ರೋಗಿಗಳನ್ನು ಆಕರ್ಷಿಸಲಾಗುತ್ತಿದೆ. ಕೆಲ ಔಷಧ ಕಂಪನಿಗಳೂ ಹಲಾಲ್ ಲೇಬಲ್ ಹಾಕಿ ಔಷಧ ಮಾರುತ್ತಿರುವ ಉದಾಹರಣೆಗಳಿವೆ. ದೇಶದಲ್ಲಿ ತಮ್ಮ ಮಾರುಕಟ್ಟೆ ಕುಸಿಯಬಹುದು ಎಂಬ ಭೀತಿಯಿಂದ ದೇಶದೊಳಗೆ ಹಲಾಲ್ ಲೇಬಲ್ ಹಾಕುವುದಿಲ್ಲ. ರಫ್ತು ಮಾಡುವಾಗ ತಮ್ಮ ಎಲ್ಲ ಉತ್ಪನ್ನಗಳ ಮೇಲೂ ಹಲಾಲ್ ಲೇಬಲ್ ಹಾಕುತ್ತಿವೆ’ ಎಂದು ದೂರಿದ್ದಾರೆ.
ಹಾಗೂ `ಚಾಕೋಲೆಟ್, ಅಕ್ಕಿ, ಬೇಳೆ ಸೇರಿದಂತೆ ಎಲ್ಲಾ ದಿನಸಿ ಪದಾರ್ಥಗಳ ಪ್ಯಾಕ್‍ಗಳ ಮೇಲೂ ಹಲಾಲ್ ಲೋಗೊ ಹಾಕುವ ಪರಿಪಾಟ ಹೆಚ್ಚಿದೆ. ಪ್ರಮಾಣಪತ್ರವನ್ನು ಅಂಟಿಸುವ ಧಾರ್ಮಿಕ ಸಂಸ್ಥೆಗಳು ಕಂಪನಿಗಳಿಂದ ಕೋಟಿಗಟ್ಟಲೆ ಹಣ ವಸೂಲಿ ಮಾಡುತ್ತವೆ, ಅದನ್ನು ಇಸ್ಲಾಂ ಧಾರ್ಮಿಕ ಉದ್ದೇಶಗಳಿಗೆ ಬಳಸುತ್ತಿವೆ. ಇದು ಕಾನೂನು ಬಾಹಿರ’ವಾಗಿದೆ ಎಂದು ತಿಳಿಸಿದ್ದಾರೆ.