ವರದಕ್ಷಿಣೆ ಕಿರುಕುಳ : ಹಿರಿಯ ನಟಿ ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ
ಬೆಂಗಳೂರು ಡಿ.14 : 20 ವರ್ಷಗಳ ಹಿಂದಿನ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಚಿತ್ರ ನಟಿ ಅಭಿನಯಾಗೆ ಹೈ ಕೋರ್ಟ್ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅತ್ತಿಗೆಗೆ ವರದಕ್ಷಿಣಿ ಕಿರುಕುಳ ನೀಡಿದ್ದು ಹಾಗೂ ಕೌಟುಂಬಿಕ ದೌರ್ಜನ್ಯ ನಡೆಸಿದ್ದಕ್ಕಾಗಿ ಅಭಿನಯಾ ಹಾಗೂ ಅವರ ತಾಯಿ ಹಾಗೂ ಸಹೋದರನಿಗೆ ಹೈ ಕೋರ್ಟ್ ಶಿಕ್ಷೆ ನೀಡಿದೆ.
2002ರಲ್ಲಿ ಅಭಿನಯಾ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ ಅವರು ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯದ ನಡೆಸಿದ್ದಾಗಿ ತನ್ನ ಗಂಡನ ಮನೆಯವರ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದೀಗ ಪ್ರಕರಣ ನಡೆದು 20 ವರ್ಷಗಳು ಕಳೆದಿದ್ದು, ಈ ಬಗ್ಗೆ ತೀರ್ಪು ನೀಡಿದ ಹೈಕೋರ್ಟ್ ಏಕಸದಸ್ಯ ಪೀಠ, ಅಭಿನಯಾ ಅವರ ತಾಯಿ ಜಯಮ್ಮಗೆ 5 ವರ್ಷ ಜೈಲು ಶಿಕ್ಷೆ ಹಾಗೂ ಅಭಿನಯಾಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
1998ರಲ್ಲಿ ಅಭಿನಯಾ ಸಹೋದರ ಶ್ರೀನಿವಾಸ್ ಜೊತೆ ಲಕ್ಷ್ಮಿದೇವಿ ವಿವಾಹ ನೆರವೇರಿತ್ತು. ಮದುವೆ ಬಳಿಕ ಶ್ರೀನಿವಾಸ್ ಕುಟುಂಬದವರು ವರದಕ್ಷಿಣಿ ಕಿರುಕುಳು ನೀಡುತ್ತಿದ್ದಾರೆ. ಹಾಗೂ ‘ಹೆರಿಗೆ ಬಳಿಕ ಪತಿ ಮನೆಯವರು ನನ್ನನ್ನು ಸೇರಿಸಿಕೊಳ್ಳಲಿಲ್ಲ. ಪೋಷಕರ ಮನೆಯಲ್ಲಿ ಉಳಿದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಿದರು. ಕೊಲೆ ಬೆದರಿಕೆಯನ್ನೂ ಹಾಕಿದರು’ ಎಂದು ದೂರಿನಲ್ಲಿ ಲಕ್ಷ್ಮಿದೇವಿ ತಿಳಿಸಿದ್ದರು.