ದೆಹಲಿ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ನಿಯಂತ್ರಿಸಲು ಹೊಸ ಮಾರ್ಗ ಸೂಚಿ
ದೆಹಲಿ ಡಿ.14 : ದೆಹಲಿಯ ವಿಮಾನ ನಿಲ್ದಾಣದಲ್ಲಿ ಜನದಟ್ಟನೆಯನ್ನು ನಿಯಂತ್ರಿಸಲು ಪ್ರಯಾಣಿಕರು 3.5 ಗಂಟೆ ಬೇಗ ಬರುವಂತೆ ಹಾಗೂ ಒಂದೇ ಲಗೇಜ್ ಬ್ಯಾಗ್ ತರುವಂತೆ ದೆಹಲಿ ವಿಮಾನಯಾನ ಸಂಸ್ಥೆ ಹೊಸ ಮಾರ್ಗ ಸೂಚಿ ಪ್ರಕಟಿಸಿದೆ.
ದೀರ್ಘ ಸರತಿ ಸಾಲುಗಳಲ್ಲಿ ನಿಲ್ಲುವುದು ಮತ್ತು ಚೆಕ್-ಇನ್ ಆಗುವಲ್ಲಿ ಭಾರಿ ವಿಳಂಬವಾಗುತ್ತಿದೆ ಎಂದು ಪ್ರಯಾಣಿಕರು ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಕಡಿವಾಣ ಹಾಕಲು ದೆಹಲಿ ವಿಮಾನಯಾನ ಸಂಸ್ಥೆ ಈ ಹೊಸ ಮಾರ್ಗ ಸೂಚಿ ಪ್ರಕಟಿಸಿದೆ.
ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿರುವ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ವಿಮಾನ ದಟ್ಟಣೆಯ ನಡುವೆ ದೀರ್ಘ ಸರತಿ ಸಾಲುಗಳು ಮತ್ತು ಜನಸಂದಣಿ ಹೆಚ್ಚಿತ್ತು. ಇದರಿಂದ ಪ್ರಯಾಣಿಕರು ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಿದ್ದರು. ಈ ನಡುವೆ ದೆಹಲಿ ಮತ್ತು ಇತರ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ದೀರ್ಘಾವಧಿಯವರೆಗೆ ಕಾಯುವ ಸ್ಥಿತಿ ಇದೆ. ಹಾಗೂ ಚೆಕ್ ಇನ್ ಗಳು ಸರಿಯಾದ ಸಮಯಕ್ಕೆ ಮುಗಿಯುತ್ತಿಲ್ಲ. ನೂಕು ನುಗ್ಗಲಿನ ಸ್ಥಿತಿ ಇದೆ ಎಂದು ಹಲವು ಪ್ರಯಾಣಿಕರು ಕೆಲವು ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇಂಡಿಗೋ ದೇಶೀಯ ವಿಮಾನ ನಿರ್ಗಮನದ ಸಮಯಕ್ಕೆ ಕನಿಷ್ಠ ಮೂರುವರೆ (3.5) ಗಂಟೆಗಳ ಮೊದಲೇ ದೆಹಲಿ ವಿಮಾನ ನಿಲ್ದಾಣವನ್ನು ತಲುಪುವಂತೆ ಹಾಗೂ ವೆಬ್ ಚೆಕ್-ಇನ್ ಮಾಡಲು ಮತ್ತು ವೇಗವಾಗಿ ಚಲಿಸಲು ಕೇವಲ ಒಂದು ಕೈ ಬ್ಯಾಗ್ ತರುವಂತೆ ಮನವಿ ಮಾಡಿದೆ.