ಮುಸ್ಲಿಂ ಮತಗಳ ವಿಭಜನೆ ತಡೆಯಲು ಕಾಂಗ್ರೆಸ್ ನ ಅಲ್ಪಸಂಖ್ಯಾತ ನಾಯಕರ ಸಭೆ: 20ಕ್ಕೂ ಹೆಚ್ಚು ಟಿಕೇಟ್ ಬೇಡಿಕೆ
ಬೆಂಗಳೂರು ಡಿ.14 : ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 60 ಕ್ಷೇತ್ರಗಳಲ್ಲಿನ ಮುಸ್ಲಿಂ ಮತಗಳು ವಿಭಜನೆಯಾಗದಂತೆ ತಡೆಯಲು ಕಾಂಗ್ರೆಸ್ ನ ಅಲ್ಪಸಂಖ್ಯಾತ ನಾಯಕರು ಸಭೆ ನಡೆಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಅವರು, ಸಾಂಪ್ರದಾಯಿಕ ಅಲ್ಪಸಂಖ್ಯಾತ ಮತಗಳು ಇತ್ತೀಚಿನ ವರ್ಷಗಳಲ್ಲಿ ವಿಭಜನೆಯಾಗಿ ಕಾಂಗ್ರೆಸ್ ಗೆ ಸಂಕಷ್ಟ ತಂದೊಡ್ಡಿರುವ ಕುರಿತು ಗಂಭೀರ ಸಭೆಯನ್ನು ನಡೆಸಲಾಗಿದೆ. ರಾಜ್ಯದ 60 ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯ ಪ್ರಾಬಲ್ಯವನ್ನು ಹೊಂದಿದ್ದು, ಮತಗಳು ವಿಭಜನೆಯಾಗದಂತೆ ತಡೆಯಲು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಇಪ್ಪತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು ಹೈಕಮಾಂಡ್ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದ್ದಾರೆ.
ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮತಗಳ ವಿಭಜನೆಯಿಂದ ಪಕ್ಷಕ್ಕೆ ನಷ್ಟವಾಗಿದೆ. ಆಮ್ ಆದ್ಮಿ ಪಕ್ಷ, ಎಐಎಂಐಎಂ. ಎಸ್ ಡಿಪಿಐ ಪಕ್ಷಗಳು ಮುಸ್ಲಿಮ್ ಮತಗಳನ್ನು ಒಡೆಯುತ್ತಿವೆ. ಕರ್ನಾಟಕದಲ್ಲಿ ಜೆಡಿಎಸ್ ಸಹ ಸೇರಿಕೊಂಡಿದೆ. ಇತ್ತೀಚೆಗೆ ಮಾತನಾಡಿದ್ದ ಎಚ್.ಡಿ. ಕುಮಾರಸ್ವಾಮಿ, ತಮ್ಮ ಪಕ್ಷ ಪೂರ್ಣ ಬಹುಮತ ಗಳಿಸಿದರೆ ಮುಸ್ಲಿಮ್ ಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದರು. ಅದೂ ಅಲ್ಲದೇ ರಾಜ್ಯ ಜೆಡಿಎಸ್ ಅಧ್ಯಕ್ಷರಾಗಿ ಮುಸ್ಲಿಂ ಸಮುದಾಯದವರೇ ಆದ ಸಿಎಂ ಇಬ್ರಾಹಿಂ ಇದ್ದಾರೆ. ಇದೆಲ್ಲದರಿಂದ ಕರ್ನಾಟಕದಲ್ಲೂ ಮುಸ್ಲಿಮ್ ಮತ ವಿಭಜನೆ ಆಗಬಾರದು ಎಂದು ಸಭೆಯಲ್ಲಿ ಚರ್ಚೆಯಾಗಿದೆ ಎಂದರು.
ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್, ವಿಧಾನ ಸಭೆ ಉಪನಾಯಕ ಯು.ಟಿ ಖಾದರ್, ಮಾಜಿ ಸಂಸದ ಐಜಿ ಸನದಿ, ಮಾಜಿ ಸಚಿವ ನಸೀರ್ ಅಹ್ಮದ್, ಮಾಜಿ ಸಚಿವರಾದ ಝಮೀರ್ ಅಹ್ಮದ್, ತನ್ವೀರ್ ಸೇಠ್, ರಹೀಂ ಖಾನ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.