ಕಳೆದ 5 ವರ್ಷಗಳಲ್ಲಿ ರೂ. 10,09,511 ಕೋಟಿಗಳ ವಸೂಲಾಗದ ಸಾಲ ರೈಟ್-ಆಫ್ ಮಾಡಿದ ಬ್ಯಾಂಕ್ ಗಳು: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ ಡಿ.13 : ಕಳೆದ ಐದು ವಿತ್ತೀಯ ವರ್ಷಗಳ ಅವಧಿಯಲ್ಲಿ ದೇಶದ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಗಳು ತಮ್ಮ ರೂ. 10,09,511 ಕೋಟಿ ಎನ್.ಪಿ.ಎ (ವಸೂಲಾಗದ ಸಾಲ) ವನ್ನು ರೈಟ್-ಆಫ್ ಮಾಡಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.

ರಾಜ್ಯ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಎನ್.ಪಿ.ಎ ಗಳನ್ನು ರೈಟ್-ಆಫ್ ಪ್ರಕ್ರಿಯೆಯ ಮೂಲಕ ಬ್ಯಾಂಕ್ ಗಳ ಬ್ಯಾಲೆನ್ಸ್ ಶೀಟ್ ನಿಂದ ತೆಗೆದುಹಾಕಲಾಗಿದೆ. ಸಾಲಗಳ ರೈಟ್ ಆಫ್ ಆದರೂ ಸಾಲಗಾರರು ಮರುಪಾವತಿಸುವ ಜವಾಬ್ದಾರಿ ಹೊಂದಿದ್ದಾರೆ ಹಾಗೂ ಈ ಪ್ರಕ್ರಿಯೆಯು ಸಾಲಗಾರರಿಗೆ ಪ್ರಯೋಜನವಾಗುವುದಿಲ್ಲ ಎಂದು ಅವರು ಹೇಳಿದರು.

ಸಾಲ ರೈಟ್ ಆಫ್ ಮಾಡಿದ ಖಾತೆಗಳಿಂದ ವಸೂಲಾತಿಗಾಗಿ ವಿವಿಧ ಕ್ರಮಗಳನ್ನು- ನ್ಯಾಯಾಲಯದಲ್ಲಿ ಅಥವಾ ಸಾಲ ವಸೂಲಾತಿ ಟ್ರಿಬ್ಯುನಲ್ ಗಳಲ್ಲಿ ಪ್ರಕರಣ ದಾಖಲಿಸುವುದು, ದಿವಾಳಿತನ ಕಾಯಿದೆ 2016 ಅನ್ವಯ ಪ್ರಕರಣ ದಾಖಲಿಸುವುದು ಹಾಗೂ ಅನುತ್ಪಾದಕ ಆಸ್ತಿಗಳ ಮಾರಾಟ ಮೂಲಕ ಕ್ರಮಕೈಗೊಳ್ಳುವುದನ್ನು ಬ್ಯಾಂಕ್ ಗಳು ಮುಂದುವರಿಸುತ್ತವೆ ಎಂದು ಅವರು ತಿಳಿಸಿದರು.

ರೈಟ್ ಆಫ್ ಮಾಡಿದ ಸಾಲದ ಖಾತೆಗಳಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಲ್ಲಿ ಬ್ಯಾಂಕ್ ಗಳು ರೂ. 1,32,036 ಕೋಟಿ ವಸೂಲಾತಿ ಮಾಡಿವೆ. ಸಾರ್ವಜನಿಕ ರಂಗದ ಬ್ಯಾಂಕ್ ಗಳಿಂದ ದೊರೆತ ಮಾಹಿತಿಯಂತೆ ಎನ್ಪಿಎ ಪ್ರಕರಣಗಳಲ್ಲಿ 3,312 ಬ್ಯಾಂಕ್ ಅಧಿಕಾರಿಗಳನ್ನು (ಎಜಿಎಂ ಮತ್ತು ಮೇಲಿನ ಶ್ರೇಣಿಯ ಅಧಿಕಾರಿಗಳು) ಕಳೆದ ಐದು ವಿತ್ತೀಯ ವರ್ಷಗಳಲ್ಲಿ ಹೊಣೆಗಾರರನ್ನಾಗಿಸಲಾಗಿದೆ ಹಾಗೂ ಲೋಪಕ್ಕಾಗಿ ಅವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!