ಪ್ರಧಾನಿ ಮೋದಿ ಹತ್ಯೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡನ ಬಂಧನ
ಭೋಪಾಲ್/ದಮೋಹ್ ಡಿ.13 : ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಯ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಾಜಾ ಪಟೇರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
“ಸಂವಿಧಾನ ಉಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಿದ್ಧರಾಗಿ’ ಎಂಬ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ದಮೋಹ್ ಜಿಲ್ಲೆಯ ಹಾತಾ ನಗರದಲ್ಲಿರುವ ರಾಜಾ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ 5.30ರ ಸುಮಾರಿಗೆ ತೆರಳಿದ್ದ ಪೊಲೀಸರು ಅವರನ್ನು ಬಂಧಿಸಿ ಪನ್ನಾ ಜಿಲ್ಲೆಯ ಪವಯ್ ನಗರಕ್ಕೆ ಕರೆದುಕೊಂಡು ಹೋಗಿರುವುದಾಗಿ ಹಾತಾ ಉಪ ವಿಭಾಗದ ಪೊಲೀಸ್ ಅಧಿಕಾರಿ ವೀರೇಂದ್ರ ಬಹದ್ದೂರ್ ಸಿಂಗ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು,’ರಾಜಾ ಅವರ ವಿರುದ್ಧ ದಾಖಲಾಗಿರುವ ಎಫ್.ಐ.ಆರ್ ನಲ್ಲಿ ಐಪಿಸಿ ಸೆಕ್ಷನ್ 115 ಮತ್ತು 117ನ್ನು ಸೇರ್ಪಡೆ ಮಾಡಲಾಗಿದೆ. ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದು ಹೇಳಿದ್ದಾರೆ.
ಪವಯ್‍ನಲ್ಲಿ ನಡೆದಿದ್ದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ರಾಜಾ, ಮೋದಿ ಅವರು ಜಾತಿ, ಧರ್ಮ ಮತ್ತು ಭಾಷೆಯ ಆಧಾರದಲ್ಲಿ ದೇಶವನ್ನು ಒಡೆಯಲಿದ್ದಾರೆ. ದಲಿತರು, ಬುಡಕಟ್ಟು ಸಮುದಾಯದವರು ಮತ್ತು ಅಲ್ಪಸಂಖ್ಯಾತರ ಭವಿಷ್ಯ ಅಪಾಯದಲ್ಲಿದೆ. ನೀವು ಸಂವಿಧಾನವನ್ನು ಉಳಿಸಬೇಕೆಂದಿದ್ದರೆ ಮೋದಿ ಅವರನ್ನು ಹತ್ಯೆ ಮಾಡಲು ಸಿದ್ಧರಾಗಿ’ ಎಂದು ಹೇಳಿದ್ದರು.
ಈ ವೀಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಘಟನೆ ಬೆನ್ನಲೇ ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಮಧ್ಯಪ್ರದೇಶ ಘಟಕದ ಅಧ್ಯಕ್ಷ ಕಮಲ್ ನಾಥ್ ಅವರು, `45 ವರ್ಷಗಳ ರಾಜಕೀಯ ಬದುಕಿನಲ್ಲಿ ನಾನು ಸತ್ಯ ಹಾಗೂ ಅಹಿಂಸೆಯನ್ನೇ ಪ್ರತಿಪಾದಿಸಿಕೊಂಡು ಬಂದಿದ್ದೇನೆ. ಮುಂದೆಯೂ ಇದಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ಮುಖಂಡರೊಬ್ಬರು ಮೋದಿ ಅವರನ್ನು ಕೊಲ್ಲಲು ಸಿದ್ಧರಾಗಿ ಎಂದು ಹೇಳಿದ್ದೇ ಆದಲ್ಲಿ ಅದನ್ನು ನಾವು ಖಂಡಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.