ರೈಲಿನ ಬೋಗಿಯಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ಮಹಿಳೆ ಮೃತದೇಹ ಪತ್ತೆ

ಬೆಂಗಳೂರು, ಡಿ.10 : ಕೆಜಿಎಫ್ ನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ರೈಲಿನ ಸೀಟೊಂದರ ಕೆಳಗೆ ಪಾಸ್ಟಿಕ್ ಚೀಲದಲ್ಲಿ ಅಪರಿಚಿತ ಮಹಿಳೆಯೊಬ್ಬರ ವೃತದೇಹವೊಂದು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಸುಮಾರು 35 ವರ್ಷ ವಯಸ್ಸಿನ ಮಹಿಳೆ ಎಂದು ಅಂದಾಜಿಸಲಾಗಿದ್ದು, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದಾಗಿ ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಮೃತ ಮಹಿಳೆಯ ಗುರುತು ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಬಂಗಾರಪೇಟೆ-ಎಸ್.ಎಂ.ವಿ.ಟಿ ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ ಸೀಟೊಂದರ ಕೆಳಗೆ ಮೃತದೇಹ ಪತ್ತೆಯಾಗಿದ್ದು, ಗುರುವಾರ ರಾತ್ರಿ 11ರ ಸುಮಾರಿಗೆ ರೈಲು ಬೆಂಗಳೂರಿನ ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್‍ಗೆ ಬಂದಾಗ ರೈಲ್ವೆ ಹವಾ ನಿಯಂತ್ರಣ ಘಟಕದ ನಿರ್ವಾಹಕರೊಬ್ಬರು ಶವವನ್ನು ಪತ್ತೆ ಹಚ್ಚಿದ್ದಾರೆ.

ರೈಲಿನಿಂದ ಪ್ರಯಾಣಿಕರು ಇಳಿದರೂ ಸೀಟೊಂದರ ಕೆಳಬದಿಯಲ್ಲಿದ್ದ ಚೀಲವನ್ನು ಮಾತ್ರ ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಅನುಮಾನ ಮೂಡಿ, ರೈಲ್ವೆ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅನುಮಾನ ಬಾರದಿರಲೆಂದು ಬೆಡ್ ಶೀಟ್ ಹೊದಿಸಿದ ಮೃತದೇಹವನ್ನು ಬಟ್ಟೆಗಳ ನಡುವೆ ತುರುಕಿ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದೊಳಗೆ ಹಾಕಿ ಯಾರಿಗೂ ತಿಳಿಯದಂತೆ ರೈಲಿನ ಸೀಟಿನ ಕೆಳಗಿ ಇಡಲಾಗಿತ್ತು. ಕೃತ್ಯ ನಡೆಸಿರುವ ಆರೋಪಿಗಳು ರೈಲಿನಿಂದ ಪರಾರಿಯಾಗಿದ್ದು, ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು ಬಂಗಾರಪೇಟೆ-ಬೆಂಗಳೂರು ಮಾರ್ಗದ ರೈಲು ನಿಲ್ದಾಣಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಪತ್ತೆಗೆ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!