ಮಚ್ಚು-ಲಾಂಗ್ ತೋರಿಸಿ ಸುಲಿಗೆ: ರೌಡಿ `ಪಪ್ಪಾಯಿ’ ಬಂಧನ ಸಾರ್ವಜನಿಕ ಮೆರವಣಿಗೆ ಮಾಡಿಸಿದ ಪೊಲೀಸರು

ಬೆಂಗಳೂರು ಡಿ.10 : ಮಚ್ಚು- ಲಾಂಗ್ ತೋರಿಸಿ ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿ ಸುಹೇಲ್ ಅಲಿಯಾಸ್ ಪಪ್ಪಾಯಿಯನ್ನು ಬಂಧಿಸಿ ಸಾರ್ವಜನಿಕವಾಗಿ ಪೊಲೀಸರು ಮೆರವಣಿಗೆ ಮಾಡಿಸಿದ್ದಾರೆ.

ಸ್ಥಳೀಯ ನಿವಾಸಿಯಾಗಿದ್ದ ಸುಹೇಲ್ ಅಪರಾಧ ಹಿನ್ನೆಲೆಯುಳ್ಳವನಾಗಿದ್ದ. ತನ್ನದೇ ತಂಡ ಕಟ್ಟಿಕೊಂಡು ಸುಲಿಗೆ ಮಾಡುತ್ತಿದ್ದ ಈತ ಡಿ.ಜೆ. ಹಳ್ಳಿಯ ಹಲವು ಅಂಗಡಿ- ಮಳಿಗೆಗಳಿಗೆ ಹೋಗಿ ಹಣ ವಸೂಲಿ ಮಾಡುತ್ತಿದ್ದ. ಹಣ ನೀಡದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಿದ್ದ. ಈತನ ರೌಡಿ ವರ್ತನೆಯಿಂದ ಜನರೆಲ್ಲ ಬೇಸತ್ತಿದ್ದರು. ಭಯದಲ್ಲಿ ಬದುಕುತ್ತಿದ್ದರು. ಇದೀಗ ಇತ್ತೀಚೆಗೆ ನಡೆದಿದ್ದ ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿ ಸುಹೇಲ್‍ನನ್ನು ಬಂಧಿಸಿದ ಡಿ.ಜೆ.ಹಳ್ಳಿ ಪೊಲೀಸರು ಆತನ ಕೈಗೆ ಕೋಳ ಹಾಕಿ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿ ಜನರಲ್ಲಿ ಧೈರ್ಯ ತುಂಬಿದ್ದಾರೆ.

ಆರೋಪಿ ನೋಡಿದರೆ ಜನರು ಭಯಪಡುತ್ತಿದ್ದರು. ಅವರಲ್ಲಿ ಧೈರ್ಯ ಮೂಡಿಸುವುದಕ್ಕಾಗಿ, ರೌಡಿಗೆ ಕೈ ಕೋಳ ಹಾಕಿ ರಸ್ತೆಯಲ್ಲಿ ಕರೆದೊಯ್ಯಲಾಯಿತು. ಜನರಿಗೆ ಕೈ ಮುಗಿಸಿ, ಇನ್ನೊಮ್ಮೆ ಇಂಥ ಕೃತ್ಯ ಮಾಡುವುದಿಲ್ಲವೆಂದು ಹೇಳಿಸಲಾಯಿತು. ಹಾಗೂ ನಿಮ್ಮ ಜೊತೆ ಪೊಲೀಸರು ಇದ್ದಾರೆ. ಪುಡಿ ರೌಡಿಗಳಿಗೆಲ್ಲ ಹೆದರಬೇಡಿ ಎಂದು ಜನರಿಗೆ ಪೊಲೀಸರು ಧೈರ್ಯ ತುಂಬಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!