ಬೆಂಗಳೂರು: ಉಡುಪಿಯ ಯುವಕರಿಗೆ ಹಲ್ಲೆ- ಆರೋಪಿಗಳ ಬಂಧನ

ಬೆಂಗಳೂರು ಡಿ.10 : ಇಲ್ಲಿನ ಕುಂದಲಹಳ್ಳಿ ಗೇಟ್ ಸಮೀಪ ಸಿಗರೇಟ್ ಹಣ ಕೇಳಿದಕ್ಕೆ ಉಡುಪಿ ಜಿಲ್ಲೆಯ ಬೈಂದೂರಿನ ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ 1.90 ಲಕ್ಷ ರೂ. ಎಗರಿಸಿ, ಪ್ರಾಣಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಡೆಲಿವರಿ ಬಾಯ್ ಕಾರ್ತಿಕ್(20), ಅಲ್ಯೂಮಿನಿಯಂ ವರ್ಕ್ ಮಾಡುವ ಸಲ್ಮಾನ್(20) ಖಾಸಗಿ ಹೊಟೇಲ್ ಮ್ಯಾನೇಜರ್ ಕಾರ್ತಿಕ್(23) ಬಂಧಿತ ಆರೋಪಿಗಳು. ಉಡುಪಿಯ ಬೈಂದೂರು ಮೂಲದ ನವೀನ್ ಕುಮಾರ್ ಹಾಗೂ ಪ್ರಜ್ವಲ್ ಶೆಟ್ಟಿ, ನಿತೀನ್ ಶೆಟ್ಟಿ ಹಲ್ಲೆಗೊಳಗಾದವರು.

ಯುವಕರಿಗೆ ಹಲ್ಲೆ ನಡೆಸಿರುವ ಆರೋಪಿಗಳ ಕೃತ್ಯ ಅಂಗಡಿಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುರುವಾರ ರಾತ್ರಿ 11.30 ರ ಸಮಯದಲ್ಲಿ 7-8 ಅಪರಿಚಿತರು ಟೀ ಕೇಳಿದ್ದು, ಅವರಿಗೆ ಕುಡಿಯಲು ಟೀ ಕೊಟ್ಟಿದ್ದು, ನಂತರ ಬೇಕೆಂದೇ ಕಿರಿಕಿರಿ ತೆಗೆದು ಹಣ ಕೊಡುವ ವಿಷಯದಲ್ಲಿ ತಗಾದೆ ತೆಗೆದು ಏಕಾಏಕಿ ಇಬ್ಬರೂ ಅಪರಿಚಿತರು ಅಂಗಡಿ ಒಳಗೆ ಬಂದು ಮನಬಂದಂತೆ ಪ್ಲಾಸ್ಟಿಕ್ ಕ್ರೇಟ್ ಮತ್ತು ಹೆಲ್ಮೆಟ್ ಹಾಗೂ ಮುಷ್ಠಿಯಿಂದ ಅಲ್ಲದೇ ನಮ್ಮ ಅಂಗಡಿಯಲ್ಲಿದ್ದ ರಾಡ್‍ನಿಂದ ಮನಸೋ ಇಚ್ಛೆ ಥಳಿಸಿದ್ದಾರೆ. ನಂತರ ಪ್ರಜ್ವಲ್‍ಶೆಟ್ಟಿ, ನಿತೀನ್ ಶೆಟ್ಟಿ ಅವರ ಮೇಲೆಯೂ ಹಲ್ಲೆ ನಡೆಸಿ ಕಾಲಿನಿಂದ ತುಳಿದಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ನನ್ನ ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರ, 25 ಸಾವಿರ ರೂ. ಬೆಲೆ ಬಾಳುವ ಚೈನ್ ತೆಗೆದುಕೊಂಡು ಹೋಗಿದ್ದಾರೆ. ಕಾಂಡಿಮೆಂಟ್ಸ್ ವಸ್ತುಗಳನ್ನು ಹಾಗೂ ಗ್ಲಾಸ್‍ಗಳನ್ನು ಒಡೆದು ಚೆಲ್ಲಾಪಿಲ್ಲಿ ಮಾಡಿ, ಕ್ಯಾಷ್ ಬಾಕ್ಸ್‍ನಲ್ಲಿ 1.90 ಲಕ್ಷ ರೂ. ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಮಾತ್ರ ವಲ್ಲದೆ ಹೋಗುವಾಗ ಪೊಲೀಸ್‍ಗೆ ಏನಾದರೂ ದೂರು ನೀಡಿದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ. ತಕ್ಷಣ ಊರು ಬಿಟ್ಟು ಹೋಗಬೇಕು. ಇಲ್ಲವಾದಲ್ಲಿ ನಿಮ್ಮನ್ನು ಸಾಯಿಸುತ್ತೇವೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಹಲ್ಲೆಗೊಳಗಾದ ನವೀನ್ ಕುಮಾರ್ ಎಚ್‍ಎಎಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಬೆಂಗಳೂರು ಕುಂದನಹಳ್ಳಿ ಗೇಟ್ ಸಮೀಪ ಬೇಕರಿಯೊಂದರ ಮೇಲೆ ನಡೆದ ದಾಂಧಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. ಹಾಗೂ ಶಾಂತಿಯುತವಾಗಿ ಜೀವನ ನಿರ್ವಹಣೆ ಮಾಡಿ ಕೊಂಡು ಬದುಕನ್ನು ಕಟ್ಟಿಕೊಂಡಿರುವ ಶ್ರಮಜೀವಿಗಳಿಗೆ ಯಾವುದೇ ರೀತಿಯ ಕಿರುಕುಳ ಆಗದಂತೆ ರಕ್ಷಣೆ ನೀಡಬೇಕು ಎಂದು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!