ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಅಬಕಾರಿ ಇಲಾಖೆಯಲ್ಲಿ 1,100 ಹುದ್ದೆಗಳ ಭರ್ತಿಗೆ ಶೀಘ್ರ ನೇಮಕ

ಬೆಂಗಳೂರು ಡಿ.8 : ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ,1100 ಹುದ್ದೆಗಳ ಭರ್ತಿಗೆ ಶೀಘ್ರ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಈ ಮೂಲಕ ನಿರುದ್ಯೋಗಿಗಳಿಗೆ ಸರಕಾರ ಶೀಘ್ರದಲ್ಲೆ ಸಿಹಿ ಸುದ್ದಿ ನೀಡಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು, ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 1,100 ಹುದ್ದೆಗಳ ಭರ್ತಿಗೆ ಕೆಪಿಎಸ್‍ಸಿ’ಗೆ ಪ್ರಸ್ತಾವನೆ ಕಳುಹಿಸಲಾಗಿದೆ.
ಇಲಾಖೆಯ ಒಟ್ಟು 1,100 ಹುದ್ದೆಗಳ ಪೈಕಿ 1000 ಅಬಕಾರಿ ಪೇದೆ ಹುದ್ದೆ, 100 ಅಬಕಾರಿ ಸಬ್ ಇನ್ಸ್‍ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅಬಕಾರಿ ಪೇದೆ ಹುದ್ದೆಗೆ ಪಿಯುಸಿ, ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಪದವಿ ಪಾಸ್ ಮಾಡಿರಬೇಕು ಎಂದು ತಿಳಿಸಿದ್ದಾರೆ. ಹಾಗೂ ಅಬಕಾರಿ ಪೇದೆ ಹುದ್ದೆಗೆ ವೇತನ ಶ್ರೇಣಿ ರೂ.21,400-42,000 ಮತ್ತು ಅಬಕಾರಿ ನಿರೀಕ್ಷಕರು ಹುದ್ದೆಗೆ ವೇತನ ಶ್ರೇಣಿ ರೂ.37,900-70,850 ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.

2021 ರ ಸೆಪ್ಟೆಂಬರ್ ಅಂತ್ಯಕ್ಕೆ ಅಬಕಾರಿ ಇಲಾಖೆಯಲ್ಲಿ 5812 ಹುದ್ದೆಗಳು ಮಂಜೂರಾಗಿದ್ದು, 4,057 ಹುದ್ದೆಗಳು ಕಾರ್ಯನಿರ್ವಹಿಸುತ್ತಿವೆ. ಹಾಗೂ ಒಟ್ಟು 1,755 ಹುದ್ದೆಗಳು ಖಾಲಿ ಇವೆ. ರಾಜ್ಯ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಡುವ ಅಬಕಾರಿ ಇಲಾಖೆಯ ಬಲವರ್ಧನೆಗೆ ಸರ್ಕಾರ ಪ್ರಾಧ್ಯಾನತೆ ನೀಡಿದೆ. ಈ ವರ್ಷ 29,000 ಕೋಟಿ ರೂ. ಆದಾಯ ಗುರಿ ನೀಡಿದ್ದು, ಈವರೆಗೆ 19,897 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 17,225 ಕೋಟಿ ರೂ. ಸಂಗ್ರಹವಾಗಿತ್ತು ಎಂದು ತಿಳಿಸಿದ್ದಾರೆ.

ಇದರೊಂದಿಗೆ ಹೊಸ ಮದ್ಯ ತಯಾರಿಕೆಗೆ ಉದ್ಯಮಿಗಳು ಮುಂದೆ ಬಂದರೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅನುಮೋದನೆ ನೀಡುತ್ತೇವೆ. ಇದರಿಂದ ರಾಜ್ಯದಲ್ಲಿ ಉದ್ಯೋಗ ಸೃಜನೆ ಹೆಚ್ಚಾಗುತ್ತದೆ. ಹಳ್ಳಿಗಳ ಸಣ್ಣಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ದೂರುಗಳಿವೆ. ಕೆಲ ಶಾಸಕರು ಕೂಡ ಈ ವಿಷಯ ಗಮನಕ್ಕೆ ತಂದಿದ್ದಾರೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!