ಹಿಮಾಚಲ ಪ್ರದೇಶ ಚುನಾವಣೆ: ಬಹುಮತ ಪಡೆದು ಆಡಳಿತ ಚುಕ್ಕಾಣಿಯತ್ತ ಕಾಂಗ್ರೆಸ್
ಹಿಮಾಚಲ ಪ್ರದೇಶ ಡಿ.8 : ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯ ಕಣಿವೆ ರಾಜ್ಯದ 68 ಕ್ಷೇತ್ರಗಳಲ್ಲಿ 12 ಗಂಟೆ ಸುಮಾರಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ 38 ರಲ್ಲಿ ಮುನ್ನಡೆ ಸಾಧಿಸಿದೆ.
ಇದೀಗ ಬಹುಮತಗಳತ್ತ ದಾಪುಗಾಲಿಟ್ಟಿರುವ ಕಾಂಗ್ರೆಸ್ ಗೆ ಅಚ್ಚರಿ ಫಲಿತಾಂಶ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಸ್ಪಷ್ಟತೆ ಇಲ್ಲದೆ, ರಾಜ್ಯದ ನೇತಾರನಿಲ್ಲದೆ ಚುನಾವಣೆ ಸ್ಪರ್ಧಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಒಂದೊಮ್ಮೆ ಅಂತಿಮ ಫಲಿತಾಂಶ ಪಕ್ಷದ ಪರವಾಗಿ ಬಂದರೂ ಕೂಡ ಮುಖ್ಯಮಂತ್ರಿ ಆಯ್ಕೆ ಸುಲಭವಾಗಿಲ್ಲ.
ಈಗಷ್ಟೇ ಪಕ್ಷದ ಚುಕ್ಕಾಣಿ ಹಿಡಿದಿರುವ ಮಲ್ಲಿಕಾರ್ಜುನ ಖರ್ಗೆಗೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸವಾಲಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ರೇಸ್‍ನಲ್ಲಿರುವವರ ಸಂಖ್ಯೆ ಅರ್ಧ ಡಜನ್‍ಗಿಂತ ಹೆಚ್ಚಿದೆ. ಇದರಲ್ಲಿ ಐವರು ಅತ್ಯಂತ ಪ್ರಬಲ ಅಭ್ಯರ್ಥಿಗಳಾಗಿದ್ದಾರೆ.
ಈ ಪೈಕಿ ಹಿಮಾಚಲ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆ, ಮಾಜಿ ಮುಖ್ಯಮಂತ್ರಿ ದಿ.ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಹೆಸರು ಮುಂಚೂಣಿಯಲ್ಲಿದೆ. ಮಂಡಿ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿರುವ ಪ್ರತಿಭಾ, ಯಾವುದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿಲ್ಲ. ಆದಾಗ್ಯೂ ಇವರು ವೀರಭದ್ರ ಸಿಂಗ್ ಅವರ ಹೆಸರಿನೊಂದಿಗೆ ಈ ಸಲ ಪ್ರಚಾರ ನಡೆಸಿದ್ದಾರೆ. ಜೊತೆಗೆ ಪಕ್ಷದ ಈ ಮಟ್ಟಿಗಿನ ಸಾಧನೆಗೆ ಪ್ರಮುಖ ಕಾರಣರು.” ಕೂಡಾ ಆಗಿದ್ದಾರೆ.
ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುಖ್ವಿಂದರ್ ಸಿಂಗ್ ಈ ಸಲ ಪ್ರಚಾರ ಸಮಿತಿ ಮುಖ್ಯಸ್ಥರು. ವೀರಭದ್ರ ಸಿಂಗ್ ಜೊತೆಗಿನ ಶೀತಲ ಸಮರದ ನಡುವೆಯೂ ಸುಖು ರಾಹುಲ್ ಗಾಂಧಿಯವರ ಆಯ್ಕೆಯಾಗಿತ್ತು. ಆದಾಗ್ಯೂ ಸಿಎಂ ಸ್ಥಾನಕ್ಕೆ ಇವರ ಹೆಸರನ್ನು ಪ್ರತಿಭಾ ಸಿಂಗ್ ಪ್ರಬಲವಾಗಿ ವಿರೋಧಿಸುವ ಸಾಧ್ಯತೆಯಿದೆ. ಮೂರು ಸಲ ಶಾಸಕರಾಗಿರುವ ಸುಖು, ಹಮಿರ್‍ಪುರದ ನಾದೌನ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮುಕೇಶ್ ಅಗ್ನಿಹೋತ್ರಿ ವೀರಭದ್ರ ಸಿಂಗ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಪ್ರತಿಭಾ ಸಿಂಗ್‍ಗೆ ಆಪ್ತರು ಕೂಡ, 4 ಸಲ ಶಾಸಕರಾಗಿರುವ ಅಗ್ನಿಹೋತ್ರಿ ಉನಾ ಜಿಲ್ಲೆಯ ಹರೋಲಿ ಕ್ಷೇತ್ರದಿಂದ ಕಣದಲ್ಲಿದ್ದಾರೆ.
ಪಕ್ಷದ ಅತ್ಯಂತ ಹಿರಿಯ ನಾಯಕ ಠಾಕೂರ್ ಕೌಲ್ ಸಿಂಗ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಇವರು 8 ಸಲ ಶಾಸಕರು. ರಾಜ್ಯ ಘಟಕದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಕೂಡ ಆಗಿದ್ದರು. ಅಲ್ಲದೆ ಪ್ರತಿಭಾ ಸಿಂಗ್ ಆಪ್ತರು ಕೂಡ. ಹೀಗಾಗಿ ಸಿಎಂ ಸ್ಥಾನಕ್ಕೆ ಪ್ರಬಲ ಹೆಸರು ಇವರದ್ದಾಗಲಿದೆ ಎನ್ನಲಾಗಿದೆ.
ಇವರೆಲ್ಲರ ನಡುವೆ 6 ಸಲ ಶಾಸಕಿಯಾಗಿರುವ ಆಶಾ ಕುಮಾರಿ ಹೆಸರೂ ಕೂಡ ಮುಂಚೂಣಿಯಲ್ಲಿದೆ. ಪಂಜಾಬ್ ಕಾಂಗ್ರೆಸ್ ಉಸ್ತುವಾರಿಯಾಗಿರುವ ಆಶಾ ಪ್ರಬಲ ಮಹಿಳಾ ನಾಯಕಿ, ಜೊತೆಗೆ ಛತ್ತೀಸ್ ಗಢದ ಸಚಿವ ಟಿ.ಎಸ್.ಸಿಂಗ್ ಸಹೋದರಿ, ಹರ್ಷವರ್ಧನ್ ಚೌಹಾಣ್, ರಾಜೇಶ್ ಧರ್ಮಾನಿ ಹೆಸರುಗಳು ಕೂಡ ಕೇಳಿಬರುತ್ತಿವೆ.